ಮೈಕ್ರೋಸಾಫ್ಟ್ ಆಫೀಸ್ 2007ರ ಕಿರು ಪರಿಚಯ
ಮೈಕ್ರೋಸಾಫ್ಟ್ ಕಂಪೆನಿ ತನ್ನ ಮುಂಚೂಣಿಯಲ್ಲಿರುವ ಆಫೀಸ್ ತಂತ್ರಾಂಶ ಗುಚ್ಛದ ಹೊಸ ಆವೃತ್ತಿ ಆಫೀಸ್ 2007ನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಕಚೇರಿಯೇ ಇರಲಿ, ಮನೆಯೆ ಇರಲಿ, ಪ್ರಯಾಣದಲ್ಲಿರಲಿ, ಕೆಲಸವನ್ನು ವೇಗವಾಗಿ, ಕಂಪ್ಯೂಟರ್ ಬಳಕೆಯಲ್ಲಿ ಕಳೆದ ಸಮಯವನ್ನು ಹೆಚ್ಚು ಉತ್ಪನ್ನದಾಯಕವಾಗಿ ಮಾಡುವಂತೆ ಈ ತಂತ್ರಾಂಶಗುಚ್ಛವನ್ನು ತಯಾರಿಸಲಾಗಿದೆ. ಹೊಸ ವಿನ್ಯಾಸ, ಉಪಕರಣಗಳಿಂದ ಕೂಡಿದ ಇವುಗಳು ಕೆಲಸವನ್ನು ಸುಲಲಿತಗೊಳಿಸುತ್ತವೆ. ಈ ಹೊಸ ಸವಲತ್ತುಗಳ ಕಡೆ ಒಂದು ಪಕ್ಷಿನೋಟ ಬೀರೋಣ.
ಹೊಸ ವಿನ್ಯಾಸ ಮತ್ತು ಯೂಸರ್ ಇಂಟರ್‌ಫೇಸ್‌ಗಳಿಂದಾಗಿ ಆಫೀಸ್ ತಂತ್ರಾಂಶ ಬಳಸುವಾಗ ಬೇಕಾದ ಆದೇಶ ಯಾವ ಮೆನುವಿನಲ್ಲಿದೆ ಎಂದು ತಡಕಾಡುವ ಸಮಯ ಉಳಿತಾಯವಾಗುತ್ತದೆ. ಈ ಸವಲತ್ತಿಗೆ ರಿಬ್ಬನ್ ಎಂದು ಹೆಸರಿಸಲಾಗಿದೆ.
ಈ ರಿಬ್ಬನ್‌ನಲ್ಲಿ ಟ್ಯಾಬ್‌ಗಳಿವೆ. ಮಾಡುತ್ತಿರುವ ಕೆಲಸಕ್ಕೆ ಅನುಗುಣವಾಗಿ ಈ ರಿಬ್ಬನ್‌ನಲ್ಲಿರುವ ಟ್ಯಾಬ್‌ಗಳು ಬದಲಾಗುತ್ತಿರುತ್ತವೆ. ಎಲ್ಲ ಆದೇಶಗಳನ್ನು ಈ ಟ್ಯಾಬ್‌ಗಳಲ್ಲಿ ಅಡಕಗೊಳಿಸಲಾಗಿದೆ. ಈ ಆದೇಶಗಳು ಕೂಡ ಮಾಡುತ್ತಿರುವ ಕೆಲಸಕ್ಕನುಗುಣವಾಗಿ ಬದಲಾಗುತ್ತಿರುತ್ತವೆ.
ಸುಧಾರಿತ ಗ್ರಾಫಿಂಗ್, ಚಾರ್ಟಿಂಗ್, ಚಿತ್ರದ ಸವಲತ್ತುಗಳಿಂದಾಗಿ ಉತ್ತಮ ರೀತಿಯ ದಸ್ತಾವೇಜು, ಸ್ಪ್ರೆಡ್‌ಶೀಟ್, ಪ್ರೆಸೆಂಟೇಶನ್‌ಗಳನ್ನು ಅತಿ ವೇಗವಾಗಿ ಮತ್ತು ಅತ್ಯುತ್ತಮವಾಗಿ ತಯಾರಿಸಬಹುದು. ಹಲವು ಸಿದ್ಧ ಚಾರ್ಟುಗಳು, ಸ್ವರೂಪಣದ ಸಾಧನಗಳಿಂದಾಗಿ ಶ್ರೀಮಂತ ಮತ್ತು ದಿಗ್ಭ್ರಮೆ ಹುಟ್ಟಿಸುವಂತಹ ಕಡತಗಳನ್ನು ತಯಾರಿಸಬಹುದು.
ಆಫೀಸ್ ಎಕ್ಸೆಲ್ 2007ನ್ನು ಬಳಸಿ ಹತ್ತು ಲಕ್ಷ ಸಾಲು ಮತ್ತು 16000 ಕಾಲಂಗಳ ಸ್ಪ್ರೆಡ್‌ಶೀಟ್ ತಯಾರಿಸಬಹುದು. ಇಷ್ಟು ದೊಡ್ಡ ಸ್ಪ್ರೆಡ್‌ಶೀಟ್ ನಿಮಗೆ ಅಗತ್ಯವಿರದಿರಬಹುದು. ಆದರೆ ಅಷ್ಟು ಸಾಮರ್ಥ್ಯ ಅದಕ್ಕಿದೆ. ಮೆಮೊರಿ ಬಳಕೆಯಲ್ಲಿ ಸುಧಾರಿಸಿರುವುದುರಿಂದ ಅತಿ ದೊಡ್ಡ ಸ್ಪ್ರೆಡ್‌ಶೀಟ್ ಬಳಸಿ ಕೂಡ ಲೆಕ್ಕಾಚಾರಗಳನ್ನು ವೇಗವಾಗಿ ಮಾಡಬಹುದು.
ಆಫೀಸ್ 2007ರ ಮುನ್ನೋಟದ ಸೌಲಭ್ಯವು ನೀವು ತಯಾರಿಸುತ್ತಿರುವ ಕಡತವು ಯಾವ ರೀತಿಯಲ್ಲಿ ಮೂಡಿಬರುತ್ತಿದೆ ಎಂಬುದನ್ನು ಸುಲಭವಾಗಿ ತೋರಿಸುತ್ತದೆ. ಕಡತವನ್ನು ಹಲವು ವಿಧಗಳಲ್ಲಿ ನೋಡಬಹುದು. ಕಡತದಲ್ಲಿ ಮಾಡುವ ಬದಲಾವಣೆಗಳನ್ನು ತಿಳಿಯಲು ಹಲವು ಮೆನು ಆದೇಶಗಳ ರಾಶಿಯಲ್ಲಿ ಹುಡುಕಾಡಬೇಕಾಗಿಲ್ಲ.
ಆಫೀಸ್ 2007ರಲ್ಲಿ ಹೊಸದಾಗಿ ಪರಿಚಯಿಸುತ್ತಿರುವ ಸ್ಟಾರ್ಟ್ ಬಟನ್ ಹಲವು ಮೆನು ಆದೇಶಗಳನ್ನು ಒಂದೇ ಕಡೆ ದೊರೆಯುವಂತೆ ಮಾಡಿದೆ.
ಹಲವು ಸಹೋದ್ಯೋಗಿಗಳ ಜೊತೆ ಕೆಲಸ ಮಾಡಲು ಬೇಕಾದ ಕೆಲವು ಹಳೆ ಮತ್ತು ಹಲವು ಹೊಸ ಸೌಲಭ್ಯಗಳನ್ನು ಆಫೀಸ್ 2007 ಒಳಗೊಂಡಿದೆ. ಸಹೋದ್ಯೋಗಿಗಳು ನಿಮ್ಮ ಕಚೇರಿಯಲ್ಲೇ ಇರಬಹುದು ಅಥವಾ ಇನ್ನೊಂದು ಕಟ್ಟಡದಲ್ಲಿರಬಹುದು, ಅಥವಾ ವಿದೇಶದಲ್ಲೇ ಇರಬಹುದು. ಆಂತರಿಕ ಜಾಲ ಮತ್ತು ಅಂತರಜಾಲಗಳನ್ನು ಬಳಸಿಕೊಂಡು ಒಂದೇ ಕಡತದ ಮೇಲೆ ಎಲ್ಲ ಸಹೋದ್ಯೋಗಿಗಳು ಕೆಲಸ ಮಾಡಬಹುದು ಮತ್ತು ಒಬ್ಬರು ತಯಾರಿಸಿದ ಕಡತಕ್ಕೆ ಇನ್ನೊಬ್ಬರು ಟಿಪ್ಪಣಿ ಸೇರಿಸಬಹುದು.
ಆಫೀಸ್ 2007ರಲ್ಲಿ ಹೊಸದಾಗಿ ಪರಿಚಯಿಸಿರುವ XPS ವಿಧಾನದಲ್ಲಿ ಕಡತವನ್ನು ಉಳಿಸಬಹುದು. ಈ ವಿಧಾನವು ಕಡತವನ್ನು ಇತರರಿಗೆ ಸುಲಭವಾಗ ಹಂಚಲು ಸಹಾಯಕಾರಿಯಾಗಿದೆ. ಇಷ್ಟು ಮಾತ್ರವಲ್ಲ, ಎಲ್ಲರಿಗೂ ಈಗಾಗಲೇ ಪರಿಚಿತವಾಗಿರುವ ಪಿಡಿಎಫ್ ವಿಧಾನದಲ್ಲೂ ಕಡತವನ್ನು ಉಳಿಸಬಹುದು ಮತ್ತು ಇತರರಿಗೆ ಹಂಚಬಹುದು. |