ಮೈಕ್ರೋಸಾಫ್ಟ್ ಆಫೀಸ್ 2003 ತಂತ್ರಾಂಶಗುಚ್ಚದಲ್ಲಿ ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್, ಔಟ್‌ಲುಕ್ ಇತ್ಯಾದಿಗಳಿವೆ. ವರ್ಡ್‌ನಲ್ಲಿ ಕನ್ನಡದ ಬೆರಳಚ್ಚು ಬಗ್ಗೆ ಇನ್ನೊಂದು ಲೇಖನದಲ್ಲಿ ವಿವರಿಸಲಾಗಿದೆ. ಕನ್ನಡದಲ್ಲಿ ಬೆರಳಚ್ಚು ಮಾಡುವ ಈ ವಿಧಾನವು ಆಫೀಸ್ ತಂತ್ರಾಂಶಗುಚ್ಚದಲ್ಲಿ ಅಡಕವಾಗಿರುವ ಇತರೆ ತಂತ್ರಾಂಶಗಳಿಗೂ ಅನ್ವಯವಾಗುತ್ತದೆ. ಅಂದರೆ ಪವರ್‌ಪಾಯಿಂಟ್‌ನಲ್ಲಿ ಕನ್ನಡದಲ್ಲಿ ಬೆರಳಚ್ಚು ಮಾಡಲೂ ಇವೇ ವಿಧಾನಗಳನ್ನು ಬಳಸಬಹುದು.
ಪವರ್‌ಪಾಯಿಂಟ್ ತಂತ್ರಾಂಶವನ್ನು ಪ್ರೆಸೆಂಟೇಶನ್‌ಗಳಿಗೆ ಬಳಸಲಾಗುತ್ತದೆ. ಯಾವುದಾದರೊಂದು ವಿಷಯದ ಬಗ್ಗೆ ಕಂಪ್ಯೂಟರ್ ಬಳಸಿ ಸ್ಲೈಡ್ ಶೋ ಮಾದರಿಯಲ್ಲಿ ಭಾಷಣ ಮಾಡಲು ಈ ತಂತ್ರಾಂಶ ಸಹಾಯಕಾರಿ. ಅದು ಮಾಹಿತಿ ತಂತ್ರಜ್ಞಾನದ ವಿಷಯಗಳೇ ಆಗಬೇಕಾಗಿಲ್ಲ. ಸಾಹಿತ್ಯ, ವೈದ್ಯಕೀಯ, ಕ್ರೀಡೆ, ಸಂಗೀತ, ಯೋಗ – ಹೀಗೆ ಯಾವುದೇ ವಿಷಯವಾಗಿರಬಹುದು. ಪವರ್‌ಪಾಯಿಂಟ್ ಬಳಸಿ ತಯಾರಿಸುವ ಸ್ಲೈಡುಗಳಲ್ಲಿ ಪಠ್ಯ, ಚಿತ್ರ, ಗ್ರಾಫ್, ಧ್ವನಿ, ವೀಡಿಯೋ –ಹೀಗೆ ಬಹುಮಾಧ್ಯಮದ ಎಲ್ಲ ಅಂಗಗಳೂ ಒಳಗೊಂಡಿರಬಹುದು.
ಪವರ್‌ಪಾಯಿಂಟ್ ಪ್ರಾರಂಭಿಸಿದಾಗ ಮೊದಲು ಕಾಣಸಿಗುವ ಸ್ಲೈಡಿನಲ್ಲಿ ಕನ್ನಡದಲ್ಲಿ ಬೆರಳಚ್ಚು ಮಾಡುವ ಯಾವುದೇ ವಿಧಾನವನ್ನು ಬಳಸಬಹುದು. ಮೈಕ್ರೋಸಾಫ್ಟ್ ಆಫೀಸ್‌ನ ಇತರೆ ತಂತ್ರಾಂಶಗಳಂತೆ ಪವರ್‌ಪಾಯಿಂಟ್ ಕೂಡ ಕನ್ನಡ ಭಾಷೆಯನ್ನು ಯುನಿಕೋಡ್ ವಿಧಾನದಲ್ಲಿ ಬಳಸುತ್ತದೆ. ಪವರ್‌ಪಾಯಿಂಟ್ 2003ರನ್ನು ಪ್ರಾರಂಭಿಸಿದಾಗ ಚಿತ್ರದಲ್ಲಿ ತೋರಿದಂತೆ ಖಾಲಿ ಸ್ಲೈಡ್ ಕಂಡುಬರುತ್ತದೆ.
ಪಠ್ಯ ಬೆರಳಚ್ಚು ಮಾಡುವ ಜಾಗದಲ್ಲಿ ಕ್ಲಿಕ್ ಮಾಡಿ ಕನ್ನಡ ಬೆರಳಚ್ಚು ಮಾಡುವ ಕೀಲಿಮಣೆಯನ್ನು ಆಯ್ಕೆ ಮಾಡಿಕೊಂಡು ಕನ್ನಡದಲ್ಲಿ ಸ್ಲೈಡ್ ತಯಾರಿ ಮಾಡಬಹುದು. ಪ್ರಥಮ ಸ್ಲೈಡ್ ಸಾಮಾನ್ಯವಾಗಿ ಭಾಷಣದ ಶೀರ್ಷಿಕೆ ಸ್ಲೈಡ್ ಆಗಿರುತ್ತದೆ. ಇಲ್ಲಿ ತೋರಿಸಿರುವ ಖಾಲಿ ಸ್ಲೈಡ್ ಇದೇ ಆಗಿದೆ. ಕನ್ನಡದಲ್ಲಿ ಬೆರಳಚ್ಚು ಮಾಡಿರುವ ಒಂದು ಸ್ಲೈಡಿನ ಉದಾಹರಣೆ ಇಲ್ಲಿದೆ.
Ctrl-M ಒತ್ತುವ ಮೂಲಕ ಹೊಸ ಸ್ಲೈಡ್ ಪ್ರಾರಂಭಿಸಲಾಗುತ್ತದೆ. ಈ ಸ್ಲೈಡ್ ಪ್ರಾರಂಭದ ಸ್ಲೈಡಿಗಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಇನ್ನು ಮುಂದೆ ಸೇರಿಸುವ ಎಲ್ಲ ಸ್ಲೈಡುಗಳು ಇದೇ ಮಾದರಿಯಲ್ಲಿರುತ್ತವೆ. ಈ ಸ್ಲೈಡಿನಲ್ಲಿ ಮೇಲ್ಭಾಗದಲ್ಲಿ ಆಯಾ ಸ್ಲೈಡಿನ ಶೀರ್ಷಿಕೆ ಬೆರಳಚ್ಚು ಮಾಡಬಹುದು. ಕೆಳಗಿನ ಭಾಗದಲ್ಲಿ ಸ್ಲೈಡಿನಲ್ಲಿ ಮೂಡಿಸಬೇಕಾಗಿರುವ ಮಾಹಿತಿಗಳನ್ನು ಬೆರಳಚ್ಚು ಮಾಡಬಹುದು. ಇಂತಹ ಒಂದು ಸ್ಲೈಡಿನ ಉದಾಹರಣೆ ಇಲ್ಲಿದೆ.
ಸ್ಲೈಡುಗಳಲ್ಲಿ ಪಠ್ಯ ಮಾತ್ರವಲ್ಲ. ರೇಖಾ ಚಿತ್ರ ಅಥವಾ ಭಾವಚಿತ್ರಗಳನ್ನೂ ಸೇರಿಸಬಹುದು ಎಂದು ಈಗಾಗಲೇ ತಿಳಿಸಿಯಾಗಿದೆ. ಈ ಚಿತ್ರಗಳ ಜೊತೆಗೇ ಕನ್ನಡ ಭಾಷೆಯಲ್ಲಿ ಪಠ್ಯವನ್ನೂ ಸೇರಿಸಬಹುದು. ಇಲ್ಲೊಂದು ಉದಾಹರಣೆಯನ್ನು ನೋಡಬಹುದು.
ಈ ಸ್ಲೈಡಿನಲ್ಲಿ ಇಸ್ಕಿ ಮತ್ತು ಯುನಿಕೋಡ್ ವಿಧಾನದ ಸಂಕೇತೀಕರಣಗಳನ್ನು ಪರಸ್ಪರ ಹೋಲಿಸಲಾಗಿದೆ. ಇದೇ ರೀತಿ ಕನ್ನಡದಲ್ಲಿ ಚಾರ್ಟ್‌ಗಳನ್ನೂ ಸೇರಿಸಬಹುದು. ಎಕ್ಸೆಲ್ 2003ರಲ್ಲಿ ತಯಾರಿಸಿದ ಚಾರ್ಟ್‌ಗಳನ್ನು ಸ್ಲೈಡಿನಲ್ಲಿ ಸೇರಿಸಬಹುದು. ಮಾರಾಟದ ದಾಖಲೆ, ಗ್ರಾಮ ಯಾ ಜಿಲ್ಲೆಯ ಅಭಿವೃದ್ಧಿ –ಹೀಗೆ ವಿಷಯ ಯಾವುದೇ ಇರಲಿ, ಅದರ ಬಗ್ಗೆ ರೇಖಾ ಚಿತ್ರ, ಛಾಯಾಚಿತ್ರ, ಗ್ರಾಫ್ ಇತ್ಯಾದಿಗಳಿಗೆ ಕನ್ನಡ ಭಾಷೆಯಲ್ಲಿ ಶಿರೋನಾಮೆ ಅಥವಾ ವಿವರಣೆಯ ಪಠ್ಯ ಸೇರಿಸುವ ಮೂಲಕ ಸ್ಲೈಡನ್ನು ಹೆಚ್ಚು ಉಪಯುಕ್ತವಾಗಿಸಬಹುದು.
ಪವರ್‌ಪಾಯಿಂಟ್‌ನಲ್ಲಿರುವ ವಿಶೇಷ ಸವಲತ್ತುಗಳನ್ನು ಬಳಸಿ ಕನ್ನಡ ಭಾಷೆಯ ಪಠ್ಯವನ್ನು ಹಲವು ಆಕರ್ಶಕ ಬಣ್ಣ, ಶೈಲಿಗಳಲ್ಲಿ ಮೂಡಿಸಬಹುದು. ಅವುಗಳನ್ನು ಅನಿಮೇಶನ್ ವಿಧಾನದಲ್ಲಿ ಪರದೆಯ ಮೇಲೆ ತೋರಿಸಲೂ ಬಹುದು.