ವಿಂಡೋಸ್ ಎಕ್ಸ್‌ಪಿಗೆ ಕನ್ನಡದ ಹೊದಿಕೆ
ಮೈಕ್ರೋಸಾಫ್ಟ್ ವಿಂಡೋಸ್ ಎಕ್ಸ್‌ಪಿ ಆಪರೇಟಿಂಗ್ ಸಿಸ್ಟಮ್‌ಗೆ ಕನ್ನಡದ ಹೊದಿಕೆ ಲಭ್ಯವಿದೆ. ಇದನ್ನು ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಿಕೊಂಡರೆ ವಿಂಡೋಸ್‌ನ ಬಹುಪಾಲು ಆದೇಶ ಮತ್ತು ಸಂದೇಶಗಳು ಕನ್ನಡ ಭಾಷೆಯಲ್ಲೇ ಬರುತ್ತವೆ. ಇದನ್ನು ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್ ಎಂದು ಕರೆಯುತ್ತಾರೆ. ಇದರಲ್ಲಿ ದಿನನಿತ್ಯ ಬಳಕೆಗೆ ಬೇಕಾಗುವ 80% ಕನ್ನಡದ ಅನುಭವ ಬರುವಂತೆ ಅನುವಾದ ಮಾಡಲಾಗಿದೆ. ಅಂದರೆ ಕೆಲವು ಆದೇಶ ಮತ್ತು ಸಂದೇಶಗಳು ಇಂಗ್ಲೀಷಿನಲ್ಲೇ ಉಳಿದಿರುತ್ತವೆ. ಆದರೆ ಈ ಆದೇಶಗಳು ಸಾಮಾನ್ಯ ಗ್ರಾಹಕರ ಬಳಕೆಗೆ ಬೇಕಾಗುವ ಆವಶ್ಯಕತೆಗಳು ಕಡಿಮೆ. ಅವು ಏನಿದ್ದರೂ ಪರಿಣತರಿಗೆ ಮಾತ್ರ ಬೇಕಾಗುವಂತಹ ಆದೇಶಗಳು.
ಈ ಕನ್ನಡದ ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್ ಅನ್ನು ಮೈಕ್ರೋಸಾಫ್ಟ್‌ನವರ ಅಂತರಜಾಲ ತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಧಿಕೃತ ವಿಂಡೋಸ್ ಎಕ್ಸ್‌ಪಿ ಇರುವವರು ಮಾತ್ರ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಮೈಕ್ರೋಸಾಫ್ಟ್‌ನವರು ಕನ್ನಡ ಮಾತ್ರವಲ್ಲ ಇತರೆ ಹಲವು ಭಾರತೀಯ ಭಾಷೆಗಳಿಗೂ ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್ ತಯಾರಿಸಿದ್ದಾರೆ. ಈ ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್ ಅನ್ನು ಇನ್‌ಸ್ಟಾಲ್ ಮಾಡಿದಾಗ ಕಂಪ್ಯೂಟರ್ ಅನ್ನು ರಿಬೂಟ್ ಮಾಡಬೇಕಾಗುತ್ತದೆ. ಈ ಹೊದಿಕೆಯನ್ನು ಅಳವಡಿಸಿದ ಮೇಲೆ ಕಂಪ್ಯೂಟರ್ ಪ್ರಾರಂಭಿಸಿದಾಗ ಇಂಗ್ಲೀಷಿನಲ್ಲಿ Start ಎಂದು ಕಾಣಿಸುವುದಿಲ್ಲ. ಬದಲಿಗೆ ಕನ್ನಡದಲ್ಲಿ ಪ್ರಾರಂಭ ಎಂದು ಕಾಣಿಸುತ್ತದೆ. ಇಂಟರ್‌ನೆಟ್ ಎಕ್ಸ್‌ಪ್ಲೋರರ್, ನೋಟ್‌ಪ್ಯಾಡ್, ಇತ್ಯಾದಿಗಳು ಕನ್ನಡದಲ್ಲಿರುತ್ತವೆ. ಅಂದರೆ ಅವುಗಳ ಮೆನುಗಳು ಕನ್ನಡ ಭಾಷೆಯಲ್ಲಿರುತ್ತವೆ. ಸಂವಾದ ಚೌಕಗಳೂ ಕನ್ನಡ ಭಾಷೆಯಲ್ಲಿ ಕಾಣಿಸುತ್ತವೆ. ಆದರೆ ಸಹಾಯ ಕಡತಗಳು ಮಾತ್ರ ಇಂಗ್ಲೀಷಿನಲ್ಲಿರುತ್ತವೆ.
ಕನ್ನಡ ಮಾತ್ರವಲ್ಲ ಇತರೆ ಭಾಷೆಗಳ ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್‌ಗಳೂ ಲಭ್ಯವಿವೆ ಎಂದು ಈಗಾಗಲೇ ತಿಳಿಸಲಾಗಿದೆ ತಾನೆ? ಒಂದಕ್ಕಿಂತ ಹೆಚ್ಚು ಭಾಷೆಯ ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್‌ಗಳನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಬಹುದು. ಆದರೆ ಒಮ್ಮೆಗೆ ಒಂದು ಭಾಷೆಯ ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್ ಅನ್ನು ಮಾತ್ರ ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಬದಲಾವಣೆ ಸುಲಭವಾಗಿ ಮಾಡಿಕೊಳ್ಳಲು ಅಸಾಧ್ಯ. ಅಷ್ಟು ಮಾತ್ರವಲ್ಲ, ಕನ್ನಡದಿಂದ ಇಂಗ್ಲೀಷಿಗೂ ಬದಲಾವಣೆ ಮಾಡಿಕೊಳ್ಳಲು ಅಸಾಧ್ಯ. ಹಾಗೆಂದು ಹೇಳಿ, ಒಮ್ಮೆ ಕನ್ನಡದ ಹೊದಿಕೆ ಅಳವಡಿಸಿದರೆ ಮುಗಿದೇ ಹೋಯಿತು, ಮತ್ತೆ ಇಂಗ್ಲೀಷ್ ಸಿಗುವುದೇ ಇಲ್ಲ ಎಂದುಕೊಳ್ಳಬೇಕಾಗಿಲ್ಲ. ಕನ್ನಡದ ಹೊದಿಕೆ (ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್) ಯನ್ನು ಅನ್‌ಇನ್‌ಸ್ಟಾಲ್ (uninstall) ಮಾಡಿದರೆ ಮತ್ತೆ ಪುನಃ ಇಂಗ್ಲೀಷ್ ಭಾಷೆ ಸಿಗುತ್ತದೆ. ಆದರೆ ಹೀಗೆ ಅನ್‌ಇನ್‌ಸ್ಟಾಲ್ ಮಾಡಿದಾಗ ಕಂಪ್ಯೂಟರನ್ನು ರಿಬೂಟ್ ಮಾಡಬೇಕಾಗುತ್ತದೆ. ಪುನಃ ಕನ್ನಡ ಬೇಕಾಗಿದ್ದರೆ ಮತ್ತೆ ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕು ಹಾಗೂ ಕಂಪ್ಯೂಟರನ್ನು ರಿಬೂಟ್ ಮಾಡಬೇಕು. ಕನ್ನಡದ ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್ ಅಳವಡಿಸಿದಾಗ ವಿಂಡೋಸ್ ಎಕ್ಸ್‌ಪಿ ಹೇಗೆ ಕಾಣಿಸುತ್ತದೆ ಎಂಬುದನ್ನು ತಿಳಿಯಲು ಇಲ್ಲಿ ನೀಡಿರುವ ಸ್ಕ್ರೀನ್‌ಶಾಟ್‌ಗಳನ್ನು ನೋಡಬಹುದು.