ಕೈಬರಹ ಗುರುತಿಸುವಿಕೆ ತಂತ್ರಜ್ಞಾನದ ಕನಸು: ರಾಮಕೃಷ್ಣನ್

 

 

ಎ.ಜಿ.ರಾಮಕೃಷ್ಣನ್, ಐಐಟಿ ಮದ್ರಾಸ್‌ನಿಂದ ಬಯೋಮೆಡಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಪಿಎಚ್.ಡಿ ಪದವಿ ಪಡೆದವರು. ಬಿಪಿಎಲ್ ಇಂಡಿಯಾ ಹಾಗೂ ಅಮೆರಿಕದ ಕಲಮಾಜೂವಿನಲ್ಲಿರುವ ಫೆಟ್ಜರ್ ಇನ್‌ಸ್ಟಿಟ್ಯೂಟ್‌ನಲ್ಲಿ ಕೆಲಸ ಮಾಡಿದ ಬಳಿಕ ಅವರು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸೇರಿದರು. ಅಲ್ಲೀಗ ಅವರು ಮೆಡಿಕಲ್ ಇಂಟಲಿಜೆನ್ಸ್ ಮತ್ತು ಭಾಷಾ ಎಂಜಿನಿಯರಿಂಗ್ (MILE) ವಿಭಾಗದ ಮುಖ್ಯಸ್ಥರು. ಅವರು ತಂಗಂ ವಾಸುದೇವನ್ ಪ್ರಶಸ್ತಿ (ಇಂಡಿಯನ್ ಅಸೋಸಿಯೇಶನ್ ಆಫ್ ಬಯೋಮೆಡಿಕಲ್ ಸೈಂಟಿಸ್ಟ್ಸ್), ಸರ್ ಆಂಡ್ರ್ಯೂ ವಾಟ್ ಕೇ ಯುವ ಸಂಶೋಧಕ ಪ್ರಶಸ್ತಿ (ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಮತ್ತು ಸರ್ಜನ್ಸ್, ಗ್ಲಾಸ್ಗೋ) ಮತ್ತು ಯುವ ತನಿಖಾದಾರ ಪ್ರಶಸ್ತಿ (ಡಿಎಸ್‌ಟಿ, ಭಾರತ ಸರಕಾರ) ತಮ್ಮದಾಗಿಸಿಕೊಂಡಿದ್ದಾರೆ. ಭಾರತೀಯ ಭಾಷಾ ತಂತ್ರಜ್ಞಾನ ಸೊಲ್ಯುಶನ್‌ಗಳು ಮತ್ತು ವೈದ್ಯಕೀಯದಲ್ಲಿ ಇಮೇಜ್ ಪ್ರೊಸೆಸಿಂಗ್ ಅವರ ಆಸಕ್ತಿಯ ಕ್ಷೇತ್ರಗಳು. ರಾಮಕೃಷ್ಣನ್ ಅವರು ಐಇಇಇ, ವೈದ್ಯಕೀಯ ಮತ್ತು ಜೀವಶಾಸ್ತ್ರದಲ್ಲಿ ಎಂಜಿನಿಯರಿಂಗ್ ಮತ್ತು ಸಿಗ್ನಲ್ ಪ್ರೊಸೆಸಿಂಗ್ ಸೊಸೈಟಿಗಳ ಸದಸ್ಯ. 2008ರ ಡಿಸೆಂಬರ್‌ವರೆಗೂ ಅವರು ಬಯೋಮೆಡಿಕಲ್ ಎಂಜಿನಿಯರಿಂಗ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷರಾಗಿದ್ದರು. ಅವರು ಐಇಟಿಇ ಮತ್ತು ಐಇ ಇದರ ಫೆಲೋ ಕೂಡ ಆಗಿದ್ದಾರೆ. ಅವರು 6 ಪಿಎಚ್.ಡಿಗಳು, 12 ಸಂಶೋಧನಾ ವಿಭಾಗದ ಮಾಸ್ಟರ್‌ಗಳು ಮತ್ತು 48 ಎಂಜಿನಿಯರಿಂಗ್ ಮಾಸ್ಟರ್ಸ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಅವರು ತಮಿಳಿನಲ್ಲಿ ಮಾಹಿತಿ ತಂತ್ರಜ್ಞಾನದ ಅಂತಾರಾಷ್ಟ್ರೀಯ ವೇದಿಕೆ, ಯೋಜನಾ ಸಲಹಾ ಸಮಿತಿ, ಭಾರತೀಯ ಭಾಷೆಗಳ ಭಾಷಾ ಡೇಟಾ ಒಕ್ಕೂಟ, ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಬಯೋಮೆಡಿಕಲ್ ಎಂಜಿನಿಯರಿಂಗ್ ಯೋಜನಾ ಪರಿಶೀಲನಾ ಸಮಿತಿಯ ಸದಸ್ಯರೂ ಆಗಿದ್ದಾರೆ. ಸದ್ಯ ಅವರು, ಭಾರತೀಯ ಭಾಷೆಗಳಲ್ಲಿ ಆನ್‌ಲೈನ್ ಕೈಬರವಣಿಗೆಯ ಗುರುತಿಸುವಿಕೆ ಎಂಬ ರಾಷ್ಟ್ರ ಮಟ್ಟದ ಸಂಶೋಧನೆಯನ್ನು ನಿರ್ದೇಶಿಸುತ್ತಿದ್ದಾರೆ. ಭಾರತೀಯ ಭಾಷೆಗಳಲ್ಲಿ ಮುದ್ರಿತ ಪುಸ್ತಕಗಳನ್ನು ದೃಷ್ಟಿ ಹೀನರಿಗೆ ಸ್ವಯಂಚಾಲಿತವಾಗಿ ಓದಿಹೇಳಬಲ್ಲ ರೀಡರ್ ಒಂದನ್ನು ಅಭಿವೃದ್ಧಿಪಡಿಸಲು ಅವರು ಕಟಿಬದ್ಧರಾಗಿದ್ದಾರೆ. ತಮಿಳು ಮತ್ತು ಕನ್ನಡಗಳಲ್ಲಿ ಡಿಜಿಟಲ್ ಪುಸ್ತಕಗಳು ಲಭ್ಯವಾಗುವಂತೆ ಮಾಡಲು ಎಂಐಎಲ್ಇ ಈಗಾಗಲೇ ಅಮೆರಿಕದ ಬುಕ್‌ಶೇರ್.ಆರ್ಗ್ ಜೊತೆ ಕೈಜೋಡಿಸಿವೆ. ರಾಮಕೃಷ್ಣ ಅವರೊಡನೆ ನಡೆಸಿದ ಸಂದರ್ಶನದ ಸಾರಾಂಶ:

 

 

ಭಾರತೀಯ ಕಂಪ್ಯೂಟಿಂಗ್ ಚಟುವಟಿಕೆಗಳಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಹೇಗೆ ಆಸಕ್ತಿ ತೋರಿತು? ಅದು ಆರಂಭವಾಗಿದ್ದು ಯಾವಾಗ?

 

ಸುಮಾರು 2000ನೇ ಇಸವಿಯಲ್ಲಿ. ಬ್ಯಾಂಕುಗಳಲ್ಲಿ ಟೋಕನ್ ನಂಬರ್ ಘೋಷಣೆಯಲ್ಲಿ ಕೇವಲ 10 ಅಂಕಿಗಳು ಮಾತ್ರವೇ ಇದ್ದರೂ, ಅವುಗಳಲ್ಲಿ ಅತ್ಯಂತ ಕೆಟ್ಟ ಉಚ್ಚಾರಣೆಗಳಿರುವುದನ್ನು ನಾನು ಗಮನಿಸಿದೆ. ವಿಶ್ವಾದ್ಯಂತ ಜನರು ಇಂಗ್ಲಿಷಿನಲ್ಲಿ ಭಾಷಾ ತಂತ್ರಜ್ಞಾನದ ಮೇಲೆ ಮಾತ್ರವೇ ಕೆಲಸ ಮಾಡುತ್ತಿದ್ದರು. ಇದಕ್ಕೆ ಕಾರಣವೆಂದರೆ ಸಿದ್ಧ ಸಂಪನ್ಮೂಲಗಳು ಲಭ್ಯವಾಗಿದ್ದವು ಮತ್ತು ಅದು ಕೂಡ ಒಂದು ಫ್ಯಾಶನ್ ಆದಂತಿತ್ತು. ಜಪಾನೀಯರು, ಚೀನೀಯರು ಮತ್ತು ಭಾರತೀಯರು ಕೂಡ ಇಂಗ್ಲಿಷಿನಲ್ಲಿ ಧ್ವನಿ ಗುರುತಿಸುವಿಕೆ ಬಗೆಗೆ ಮಾತ್ರವೇ ಕೆಲಸ ಮಾಡುತ್ತಿದ್ದರು. ಹೀಗಾಗಿ ಇಂಗ್ಲಿಷ್ ಬೇಡ, ಭಾರತೀಯ ಭಾಷೆಗಳಲ್ಲಿ ಮಾತ್ರವೇ ಕೆಲಸ ಮಾಡೋಣವೆಂದು ನಿರ್ಧರಿಸಿದೆ.

 

ಭಾರತೀಯ ಭಾಷೆಗಳು ನಿಧಾನಗತಿಯಲ್ಲಿ ಅವಸಾನವಾಗುತ್ತಿವೆ ಎಂಬುದೂ ನನ್ನ ಗಮನಕ್ಕೆ ಬಂತು ಮತ್ತು ಭಾರತದ ಪ್ರಮುಖ ಪಟ್ಟಣಗಳಲ್ಲಿ ನಮ್ಮ ಭಾಷೆಯನ್ನು ಜೀವಂತವಾಗಿರಿಸಿರುವುದೆಂದರೆ ಮನರಂಜನೆ ಮತ್ತು ಮಾಧ್ಯಮಗಳೇ ಆಗಿದ್ದವು. ಸ್ವಾತಂತ್ರ್ಯ ದೊರೆತ 63 ವರ್ಷಗಳಲ್ಲಿ, ವಿಶ್ವದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆಲ್ಲಾ ಅದಕ್ಕೆ ಸರಿ ಸಮನಾಗಿ ನಮ್ಮ ಭಾಷೆಗಳ ಬೆಳವಣಿಗೆಯಾಗಲು ಯಾವುದೇ ವ್ಯವಸ್ಥಿತ ಪ್ರಯತ್ನಗಳನ್ನು ಒಂದು ದೇಶವಾಗಿ ನಾವು ಮಾಡಲಿಲ್ಲ. ಹೀಗಾಗಿ, ಯಾರಾದರೂ ಭಾರತೀಯ ಭಾಷೆಗಳ ಅಧ್ಯಯನಕ್ಕೆ ಬಯಸಿದರೆ, ಇಲ್ಲಿ ಪುಸ್ತಕಗಳಿಲ್ಲ; ರಾಷ್ಟ್ರೀಯ ಭಾಷೆ ಹಿಂದಿಯೂ ಸೇರಿದಂತೆ ಯಾವುದೇ ಭಾರತೀಯ ಭಾಷೆಗಳಲ್ಲಿ ತಾಂತ್ರಿಕ ಪದಗಳಿಗಾಗಿ ಪ್ರಮಾಣೀಕೃತ ಶಬ್ದಕೋಶಗಳಿಲ್ಲ. ಇದು ಗಂಭೀರ ವಿಷಯ. ಯಾಕೆಂದರೆ ಸಂಪೂರ್ಣವಾಗಿ ನಮ್ಮ ಸಂಸ್ಕೃತಿ ಮತ್ತು ಸಾಹಿತ್ಯಗಳು ಭವಿಷ್ಯದ ಪೀಳಿಗೆಗೆ ದೊರೆಯುವಂತಿಲ್ಲ. ಜಪಾನ್, ಜರ್ಮನಿ ಮತ್ತು ಫ್ರಾನ್ಸ್‌ಗಳಲ್ಲಿ, ಜನರು ತಮ್ಮ ಪಿಎಚ್.ಡಿ ಪ್ರಬಂಧವನ್ನು ಕೂಡ ತಮ್ಮದೇ ಸ್ವಂತ ಭಾಷೆಯಲ್ಲಿ ಬರೆಯಬಲ್ಲರು. ಇದಕ್ಕಾಗಿ ಏನಾದರೂ ಮಾಡಬೇಕು ಎಂದು ನಾನು ಯೋಚಿಸಿದೆ.

 

ಇಂಡಿಕ್ ಕಂಪ್ಯೂಟಿಂಗ್ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಎದುರಿಸಿದ ಸವಾಲುಗಳು ಮತ್ತು ಕೈಗೊಂಡ ಕ್ರಮಗಳೇನು?

 

ನಾವು MILE ಪ್ರಯೋಗಾಲಯದಲ್ಲಿ, ತಮಿಳು ಮತ್ತು ಕನ್ನಡ ಒಸಿಆರ್‌ಗಳು ಮತ್ತು ಪಠ್ಯದಿಂದ-ಧ್ವನಿ ವ್ಯವಸ್ಥೆಗೆ ಸಂಬಂಧಿಸಿದಂತೆ ಒಳ್ಳೆಯ ಕಾರ್ಯನಿರತ ಪ್ರೋಟೋಟೈಪ್‌ಗಳನ್ನು ಹೊಂದಿದ್ದೇವೆ. ನಮ್ಮಲ್ಲಿರುವ ಪಠ್ಯದಿಂದ ಧ್ವನಿ (ಟಿಟಿಎಸ್) ರೂಪಿಸುವ ವ್ಯವಸ್ಥೆಯ ವೆಬ್ ಡೆಮೋ ಕೂಡ http://mile.ee.iisc.ernet.in/tts ನಲ್ಲಿ ಲಭ್ಯವಿದೆ. ಸಿಂಗಾಪುರದಲ್ಲಿ ತಮಿಳು ಬೋಧಿಸುವ ಶಿಕ್ಷಕಿಯೊಬ್ಬರು, ತನ್ನ ವಿದ್ಯಾರ್ಥಿಗಳಿಗೆ ತಮಿಳು ಶಬ್ದಗಳ ಉಚ್ಚಾರಣೆ ಹೇಳಿಕೊಡಲು ಮತ್ತು ಅವರ ಪ್ರಾಜೆಕ್ಟ್‌ಗಳಿಗಾಗಿ ನಮ್ಮ ಟಿಟಿಎಸ್ ಅನ್ನು ಬಳಸುತ್ತಿರುವುದಾಗಿಯೂ ಹೇಳಿದ್ದರು! ನಾವು ನೂರಾರು ಜನರಿಂದ ಒಳ್ಳೆಯ ಫೀಡ್‌ಬ್ಯಾಕ್ ಪಡೆದಿದ್ದೇವೆ ಮತ್ತು ಜಗತ್ತಿನಾದ್ಯಂತ ಸುಮಾರು ಸಾವಿರ ಮಂದಿ ನಮ್ಮ ವೆಬ್ ಡೆಮೋವನ್ನು ಪರೀಕ್ಷಿಸಿದ್ದಾರೆ.

ಮಾತ್ರವಲ್ಲದೆ, ಆನ್‌ಲೈನ್‌ನಲ್ಲಿ ತಮಿಳು ಮತ್ತು ಕನ್ನಡ ಕೈಬರಹ ಗುರುತಿಸುವಿಕೆಯ ಬಗ್ಗೆಯೂ ನಾನು ಕೆಲಸ ಮಾಡುತ್ತಿದ್ದೇನೆ. ಚೆನ್ನೈಯಲ್ಲಿರುವ ಎರಡು ಖಾಸಗಿ ಉದ್ಯಮಗಳು ಮತ್ತು ಪುಣೆಯ CDAC ಸಹಯೋಗದಲ್ಲಿ, ಜನರು ಕೈಬರಹದಲ್ಲಿ ಭರ್ತಿ ಮಾಡಿರುವುದನ್ನು ಗುರುತಿಸಲು ನಮ್ಮ ಕೈಬರಹ ಗುರುತಿಸುವಿಕೆ ಎಂಜಿನ್‌ಗಳನ್ನು ಬಳಸಬಹುದಾದ, ಮೂರು ಫಾರ್ಮ್ ಫಿಲ್ಲಿಂಗ್ ಅಪ್ಲಿಕೇಶನ್‌ಗಳನ್ನು ನಾವು ಅಭಿವೃದ್ಧಿಪಡಿಸಿದ್ದೇವೆ. ಭಾರತದಲ್ಲಿ ಇದು ಸಂಶೋಧನೆಯ ಹೊಸ ಕ್ಷೇತ್ರ ಮತ್ತು ಕಠಿಣವೂ ಆಗಿರುವುದರಿಂದ, ಸದ್ಯಕ್ಕೆ ಈ ಅಪ್ಲಿಕೇಶನ್‌ಗಳು ಸುಮಾರು 80 ಶೇಕಡಾ ನಿಖರತೆಯನ್ನು ನೀಡಬಲ್ಲವು.

ಭಾರತೀಯ ವಿಜ್ಞಾನ ಸಂಸ್ಥೆಯ ಸಹಾಯಕ ನಿರ್ದೇಶಕರಾಗಿರುವ ಪ್ರೊ.ಎನ್.ಬಾಲಕೃಷ್ಣನ್ ಅವರು, ಹಿಂದಿ ಮತ್ತು ಇತರ ಭಾರತೀಯ ಭಾಷೆಗಳನ್ನು ಒಳಗೊಂಡ ಯಾಂತ್ರೀಕೃತ ಭಾಷಾಂತರದ ಕುರಿತು ಸಂಶೋಧನೆ ಮಾಡುತ್ತಿದ್ದಾರೆ.

 

ಕೈಬರವಣಿಗೆ ಒಸಿಆರ್ ಅಭಿವೃದ್ಧಿಯ ಬಗ್ಗೆ ನಿಮಗೆ ಆಸಕ್ತಿ ಹೇಗೆ ಹುಟ್ಟಿತು?

 

ಮುದ್ರಿತ ಒಸಿಆರ್ ಬಗ್ಗೆ ಕೆಲಸ ಮಾಡುತ್ತಿರುವಾಗ, ಸಹಜವಾಗಿ ಕೈಬರಹ ಗುರುತಿಸುವಿಕೆ ಮೇಲೆ ಆಸಕ್ತಿ ಹುಟ್ಟಿತು. ಯಾಕೆಂದರೆ ಇದು ಕೂಡ ಕಂಪ್ಯೂಟರ್‌ಗಳಿಗೆ ಕೀಬೋರ್ಡ್ ಆಧಾರಿತ ಇನ್‌ಪುಟ್ ಹೆಚ್ಚಿಸಲು ಭಾರತೀಯ ಭಾಷೆಗಳಿಗೆ ಒಳ್ಳೆಯ ಸಹಜವಾದ ಇಂಟರ್ಫೇಸ್ ಆಗಬಲ್ಲುದಾಗಿತ್ತು. ಇಂಗ್ಲಿಷ್ ಗೊತ್ತಿಲ್ಲದ ಮಂದಿ ಮತ್ತು ಕೀಬೋರ್ಡ್ ಬಳಸಿ ಗೊತ್ತಿಲ್ಲದ ಜನರಿಗೆ, ಕೈಬರಹ ಇನ್‌ಪುಟ್ ವ್ಯವಸ್ಥೆಯು ಉಪಯುಕ್ತವಾದೀತು.

 

ಕೈಬರಹ ಒಸಿಆರ್‌ಗಳು ಭಾರತೀಯ ಭಾಷೆ ಜೊತೆ ಹೇಗೆ ಕೆಲಸ ಮಾಡುತ್ತದೆ?

 

ನಾನು TDIL, MCIT ನೆರವು ಮತ್ತು ಐಐಟಿ ಮದ್ರಾಸ್, ಐಐಟಿ ಹೈದರಾಬಾದ್, ಪುಣೆಯ CDAC ಮತ್ತು ಕೋಲ್ಕತಾದ ಐಎಸ್ಐ ಮುಂತಾದವುಗಳ ಪಾಲುದಾರರು ಅನುಕ್ರಮವಾಗಿ ತೆಲುಗು, ಮಲಯಾಳಂ, ಹಿಂದಿ ಮತ್ತು ಬಾಂಗ್ಲಾ ಭಾಷೆಗಳಲ್ಲಿ ಕೆಲಸ ಮಾಡುವ ರಾಷ್ಟ್ರೀಯ ಮಟ್ಟದ ಕನ್ಸಾರ್ಷಿಯಂ ಸಂಶೋಧನಾ ಯೋಜನೆಯೊಂದರ ನೇತೃತ್ವ ವಹಿಸಿದ್ದೇನೆ. ನಮ್ಮ ಪರಿಣತರು ಅಭಿವೃದ್ಧಿಪಡಿಸಿರುವ ಗುರುತಿಸುವಿಕೆ ಎಂಜಿನ್‌ಗಳನ್ನು ಬಳಸಿ, ಚೆನ್ನೈಯ ಲರ್ನ್‌ಫನ್ ಸಿಸ್ಟಮ್ಸ್ ಮತ್ತು ಸಿ.ಕೆ.ಟೆಕ್ನಾಲಜೀಸ್ ಹಾಗೂ ಪುಣೆಯ CDAC ಕೂಡ, ಅಪಘಾತ ವರದಿ ಅರ್ಜಿ, ಋಣಭಾರ (ಎನ್ಕಂಬರೆನ್ಸ್) ಪ್ರಮಾಣಪತ್ರ ಅರ್ಜಿ ಮತ್ತು ಜನಗಣತಿ ಮಾಹಿತಿ ಸಂಗ್ರಹ ಅರ್ಜಿಗಳನ್ನು ಅಭಿವೃದ್ಧಿಪಡಿಸಿವೆ.

ಈ ಕುರಿತು ಭಾರತ ಸರಕಾರದ TDIL ನೆರವಿನ ಕನ್ಸಾರ್ಷಿಯಂ ಮೋಡ್ ಮೂಲಕ ಸುಮಾರು 3 ವರ್ಷಗಳ ಹಿಂದೆ ಗಂಭೀರವಾದ ಸಂಶೋಧನೆ ಆರಂಭವಾಯಿತು. ಅಕ್ಷರಗಳ ಮಟ್ಟದಲ್ಲಿ ಉತ್ತಮ ಬರವಣಿಗೆಯಲ್ಲಿ ನಾವು ಶೇ.85ರಷ್ಟು ನಿಖರತೆಯನ್ನು ಸಾಧಿಸಿದ್ದೇವೆ. ನಮ್ಮ ಬಳಿ ಉತ್ತಮ ಟಿಪ್ಪಣಿಸಹಿತವಾದ ಡೇಟಾಬೇಸ್ ಇದ್ದಲ್ಲಿ ಯಾವುದೇ ಭಾಷಾ ತಂತ್ರಜ್ಞಾನದ ಸಂಶೋಧನಾ ಕಾರ್ಯಗಳು ವೇಗ ಪಡೆಯುತ್ತವೆ. ಇಂತಹಾ ಡೇಟಾಬೇಸ್ ಇಲ್ಲದಿರುವುದರಿಂದಾಗಿಯೇ ಪ್ರಸಕ್ತ ಪ್ರಕ್ರಿಯೆಗಳು ನಿಧಾನಗತಿಯಲ್ಲಿವೆ. ಇದಕ್ಕಾಗಿ, ಮೇಲೆ ಹೇಳಿದ ಎಲ್ಲ ಭಾಷೆಗಳಲ್ಲಿ ಒಳ್ಳೆಯ ಕೈಬರವಣಿಗೆಯ ಡೇಟಾಬೇಸ್ ಸಂಗ್ರಹಿಸಲು ನಾವು ಸಾಕಷ್ಟು ಶ್ರಮ ವ್ಯಯಿಸಿದ್ದೇವೆ. ಮೊದಲ ಅಪ್ಲಿಕೇಶನ್ ಅನ್ನು ಜನರು ಬಳಸುವಂತಾಗಲು ಕನಿಷ್ಠ 3 ವರ್ಷಗಳಾದರೂ ಬೇಕಾಗುತ್ತದೆ. ಶೀಘ್ರದಲ್ಲೇ, ಅಸ್ಸಾಮೀ ಮತ್ತು ಪಂಜಾಬಿ (ಗುರುಮುಖಿ) ಭಾಷೆಗಳಲ್ಲಿ ಕೆಲಸ ಮಾಡಬಲ್ಲ ಸಂಸ್ಥೆಗಳನ್ನು ಪಾಲುದಾರರನ್ನಾಗಿ ಸೇರಿಸಿಕೊಳ್ಳಲಿದ್ದೇವೆ.

ಇದಲ್ಲದೆ, ಕೈಬರಹ ಗುರುತಿಸುವಿಕೆಯನ್ನು ಒಳಗೊಂಡ ಸಮರ್ಪಕವಾದ ಅಪ್ಲಿಕೇಶನ್‌ಗಳು, ಮತ್ತು ಬಹುಶಃ ಆಸಕ್ತಿಯುತ ಗೇಮ್‌ಗಳನ್ನು ನಿರ್ಮಿಸಲು ಕಾಲೇಜು ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ತಂತ್ರಜ್ಞಾನ ಸ್ಪರ್ಧೆಯನ್ನು ಏರ್ಪಡಿಸುವ ಬಗ್ಗೆ ಚಿಂತನೆ ಮಾಡಿದ್ದೇನೆ. ಪುಟ್ಟ ಸಾಧನಗಳೂ ಸೇರಿದಂತೆ ವಿಭಿನ್ನ ಕಂಪ್ಯೂಟಿಂಗ್ ಸಾಧನಗಳಲ್ಲಿ ಭಾರತೀಯ ಭಾಷೆಗಳ ಬಳಕೆಯು, ಸೂಕ್ತ ರೀತಿಯ ಅಪ್ಲಿಕೇಶನ್‌ಗಳ ನೆರವಿನಿಂದಾಗಿ, ಸಾಕಷ್ಟು ಹೆಚ್ಚಾಗಲಿದೆ ಎಂಬುದು ನಮ್ಮ ಕನಸು.

 

ಭಾರತದ ಇತರ ಯಾವ ಭಾಷೆಗಳಲ್ಲಿ ಕಂಪ್ಯೂಟಿಂಗ್ ಚಟುವಟಿಕೆಗಳು ನಡೆಯುತ್ತಿವೆ?

 

ದ್ವಿಭಾಷಿಕ (ಭಾರತೀಯ ಭಾಷೆ ಮತ್ತು ಇಂಗ್ಲಿಷ್) ಪಠ್ಯದಿಂದ ಧ್ವನಿ ಸಿಂಥೆಸಿಸ್ ಮತ್ತು ತಮಿಳು ಮತ್ತು ಕನ್ನಡದಲ್ಲಿ ಮುದ್ರಿತ ಪಠ್ಯ ಗುರುತಿಸುವಿಕೆ (ಒಸಿಆರ್) ಸದ್ಯಕ್ಕೆ ನಮ್ಮ ಕೈಯಲ್ಲಿರುವ ಸಂಶೋಧನಾ ಯೋಜನೆಗಳು. ಶೀಘ್ರದಲ್ಲೇ, ಒಳ್ಳೆಯ ಗುಣಮಟ್ಟದಲ್ಲಿ ತಮಿಳಿನಿಂದ ಕನ್ನಡಕ್ಕೆ ಭಾಷಾಂತರದ ಬಗ್ಗೆ, ಮತ್ತು ಭಾರತದ ಬಹುಭಾಷಾ ಪರಿಸ್ಥಿತಿಗೆ ತಕ್ಕುದಾದ ಸ್ವತಂತ್ರ ಭಾಷಾ ಧ್ವನಿ ಗುರುತಿಸುವಿಕೆ ಬಗ್ಗೆ ಕೆಲಸ ಪ್ರಾರಂಭಿಸಬೇಕೆಂದಿದ್ದೇನೆ.

 

ಇಂಡಿಕ್ ಕಂಪ್ಯೂಟಿಂಗ್‌ನಲ್ಲಿ ನೀವು ಯಾವ ಗುರಿ ತಲುಪಬೇಕೆಂದಿದ್ದೀರಿ?

 

ಇಂಗ್ಲಿಷನ್ನೇ ತಿಳಿದಿಲ್ಲದ ಎಲ್ಲ ಭಾರತೀಯರು, ಇಂಗ್ಲಿಷ್ ಚೆನ್ನಾಗಿ ಬಲ್ಲ ಇತರರಷ್ಟೇ ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನಗಳಿಗೆ ಒಗ್ಗಿಕೊಂಡಿದ್ದಾರೆ. ಯಾವುದೇ ಭಾರತೀಯ ಭಾಷೆಯಲ್ಲಿ ಮುದ್ರಿತವಾಗಿರುವ ಯಾವುದೇ ಪುಸ್ತಕ ಓದಲು ಯಾವುದೇ ರೀತಿಯ ಓದುವಿಕೆಯ ಅಸಮರ್ಥತೆ (ದೃಷ್ಟಿ ಹೀನತೆ ಅಥವಾ ಲಿಪಿಯ ಬಗೆಗಿನ ಅರಿವಿನ ಕೊರತೆ)ಯು ಜನರಿಗೆ ಈಗ ದೊಡ್ಡ ಅಡಚಣೆಯಾಗಿ ಉಳಿದಿಲ್ಲ. ಯಾವುದೇ ಭಾರತೀಯನಿಗೆ ಬೇಗನೇ ಮತ್ತು ಸುಲಭವಾಗಿ ಕಲಿಯುವಂತಾಗಲು ಶಾಸ್ತ್ರೀಯ ಸಾಹಿತ್ಯ, ಸಂಗೀತ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭಾರತೀಯ ಭಾಷೆಗಳಲ್ಲಿ ಲಭ್ಯವಿರುವ ಯಾವುದೇ ಇತರ ಮಾಹಿತಿಗಳು ಭಾರತೀಯ ಭಾಷೆಗಳಲ್ಲಿ ಲಭ್ಯವಿರುತ್ತವೆ. ಇದು ನನ್ನ ಜೀವಿತಾವಧಿಯಲ್ಲೇ ಖಂಡಿತವಾಗಿಯೂ ಆಗಬೇಕು.

 

ಇಂಡಿಕ್ ಕಂಪ್ಯೂಟಿಂಗ್ ಬಗ್ಗೆ ಭಾರತೀಯ ಪ್ರಜೆಗಳು ಏನು ಮಾಡಬೇಕು?

 

ಸದ್ಯಕ್ಕೆ ಇಂಗ್ಲಿಷ್ ಟೈಪಿಂಗ್‌ಗೆ ಲಭ್ಯವಿರುವ ಕ್ವೆರ್ಟಿ (QWERTY) ಕೀಬೋರ್ಡ್‌ಗಿಂತಲೂ ಹೆಚ್ಚು ಸರಳವಾಗಿ ಮತ್ತು ಉತ್ತಮವಾಗಿ ವಿನ್ಯಾಸಗೊಳಿಸಲಾಗಿರುವ ಭಾರತೀಯ ಭಾಷಾ ಕೀಲಿಮಣೆಗಳಲ್ಲೇ ಬೆರಳಚ್ಚಿಸುವುದನ್ನು ಕಲಿಯಲು ಆರಂಭಿಸಬೇಕು. ಪ್ರತಿಯೊಂದು ಭಾಷೆಯಲ್ಲಿಯೂ ವಿಭಿನ್ನ ಜ್ಞಾನ ಕ್ಷೇತ್ರಗಳಲ್ಲಿ ಗುಣಮಟ್ಟದ ವಿಷಯಗಳನ್ನು ಒದಗಿಸಬಲ್ಲ, ಸಮರ್ಥ ಮತ್ತು ಪರಿಣತ ಜನರಿಂದ ರೂಪುಗೊಳ್ಳುವ ವಿಕಿಪೀಡಿಯದಂತಹಾ ಸಾಕಷ್ಟು ಸಮುದಾಯ ಯೋಜನೆಗಳನ್ನು ಎಂಜಿನಿಯರಿಂಗ್ ವಿದ್ಯಾರ್ಥಿಗಳು, ವಿಶೇಷವಾಗಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳು ರಚಿಸಬೇಕು. ಯಾಂತ್ರೀಕೃತ ಭಾಷಾಂತರಕ್ಕೆ ಪರ್ಯಾಯ ಕೋಶ, ಪದಸಮುಚ್ಚಯ, ವಿಭಿನ್ನ ಕಂಪ್ಯೂಟರೀಕೃತ ಭಾಷಾ ಸಂಶೋಧನಾ ಅಧ್ಯಯನಗಳಿಗೆ ನೆರವಾಗಬಲ್ಲ ನುಡಿಗಟ್ಟುಗಳ ಟ್ಯಾಗ್ ಉಳ್ಳ ಪಠ್ಯ ಕೋಶಗಳನ್ನೊಳಗೊಂಡು, ಭಾಷಾ ತಜ್ಞರು ಜಗತ್ತಿನ ಯಾವ ಮೂಲೆಯಲ್ಲಾದರೂ ಕುಳಿತು ಅತ್ಯಂತ ಮಹತ್ವದ ಡೇಟಾಬೇಸ್ ರಚಿಸಲು ನೆರವಾಗಬಲ್ಲ ಸೈಟ್‌ಗಳ ಅಗತ್ಯವೂ ಇದೆ. ಇದಲ್ಲದೆ, ಭಾರತೀಯ ಭಾಷೆಗಳಲ್ಲಿ ಧ್ವನಿ ಪೋರ್ಟಲ್‌ಗಳು ಮತ್ತು ಬಹುಮಾಧ್ಯಮಗಳ ಸಹಿತವಾದ ಭಾರತೀಯ ಭಾಷೆಗಳಲ್ಲಿ ಆಸಕ್ತಿದಾಯಕ ಶಿಕ್ಷಣ ಸಾಮಗ್ರಿಗಳ ಅಗತ್ಯವೂ ಇದೆ.

 

Read More on....