ಕಂಪ್ಯೂಟರಿನಲ್ಲಿ ಟಿವಿ ವೀಕ್ಷಣೆಗೆ ವಿಂಡೋಸ್ ಮೀಡಿಯಾ ಸೆಂಟರ್
ವಿಂಡೋಸ್ ಮೀಡಿಯಾ ಸೆಂಟರ್‌ನಲ್ಲಿ ಟಿವಿ ಶೋಗಳನ್ನು ನಿಮಗೆ ಬೇಕೆಂದಾಗ ನಿಮ್ಮ ಕಂಪ್ಯೂಟರ್ ಮೂಲಕವೇ ನೋಡಬಹುದು ಎಂಬುದು ನಿಮಗೆ ಗೊತ್ತೇ? ವಿಂಡೋಸ್ 7 ನಿಮಗಾಗಿ ಮತ್ತು ಬೆಳೆಯುತ್ತಿರುವ ಆಧುನಿಕತೆಗೆ, ಅವಶ್ಯಕತೆಗಳಿಗೆ ಅನುಗುಣವಾಗಿ ಇಂಥದ್ದೊಂದು ವ್ಯವಸ್ಥೆಯನ್ನು ಮಾಡಿಕೊಟ್ಟಿದೆ.
ಅಂತರಜಾಲ ಜಗತ್ತಿನಲ್ಲಿ ಮಾಧ್ಯಮದ ಕಂಟೆಂಟ್‌ಗಳು ಕೂಡ ಹೆಚ್ಚಾಗುತ್ತಲೇ ಇವೆ. ವ್ಯವಸ್ಥಿತವಾಗಿರುವ ಆನ್‌ಲೈನ್ ಟಿವಿ ಶೋಗಳು, ಚಲನಚಿತ್ರಗಳನ್ನು ನೀವು ಆಯ್ದುಕೊಂಡು ನೋಡಬಹುದಾಗಿದೆ. ಬ್ರಾಡ್‌ಬ್ಯಾಂಡ್ ಸಂಪರ್ಕ ಇದ್ದರಾಯಿತು, ವಿಂಡೋಸ್ ಮೀಡಿಯಾ ಸೆಂಟರ್ ಅಂತರಜಾಲದ ಟಿವಿ ಚಾನೆಲ್‌ಗಳು ಮತ್ತಿತರ ಕಂಟೆಂಟ್‌ಗಳೊಂದಿಗೆ ನೇರ ಸಂಪರ್ಕ ಹೊಂದುತ್ತದೆ.
ವಿಂಡೋಸ್ 7 ಹೋಂ ಪ್ರೀಮಿಯಂ, ಅಲ್ಟಿಮೇಟ್, ಪ್ರೊಫೆಶನಲ್ ಮತ್ತು ಎಂಟರ್‌ಪ್ರೈಸ್ ಆವೃತ್ತಿಗಳಲ್ಲಿ ಹಾಗೂ ವಿಂಡೋಸ್ ವಿಸ್ತಾ ಹೋಂ ಪ್ರೀಮಿಯಂ ಮತ್ತು ಅಲ್ಟಿಮೇಟ್ ಆವೃತ್ತಿಗಳಲ್ಲಿ ವಿಂಡೋಸ್ ಮೀಡಿಯಾ ಸೆಂಟರ್ ಒಳಗೊಂಡಿರುತ್ತದೆ.
ಹಾಗಿದ್ದರೆ ನಿಮ್ಮ ಕಂಪ್ಯೂಟರಿನಲ್ಲಿಯೇ ಟಿವಿ ವೀಕ್ಷಿಸುವುದು ಹೇಗೆ ಎಂಬುದನ್ನು ತಿಳಿಯೋಣ.
ನೀವು ಮೊದಲ ಬಾರಿ ವಿಂಡೋಸ್ ಮೀಡಿಯಾ ಸೆಂಟರ್ ಕ್ಲಿಕ್ ಮಾಡಿದಾಗ, ಪ್ರಾರಂಭಿಸುವುದು ಹೇಗೆ ಎಂಬುರ ಬಗ್ಗೆ ಸ್ವಾಗತ ಪುಟವೊಂದು ತೆರೆಯುತ್ತದೆ. ಇಲ್ಲಿ ಎಕ್ಸ್‌ಪ್ರೆಸ್ ಹಾಗೂ ಕಸ್ಟಮ್ ಸೆಟಪ್ ಮಾಡಬೇಕೇ ಎಂಬ ಎರಡು ಕೊಂಡಿಗಳಿರುತ್ತವೆ. ನೇರವಾಗಿ ನೀವದಕ್ಕೆ ಧುಮುಕಬೇಕಾದರೆ, ಎಕ್ಸ್‌ಪ್ರೆಸ್ ಸೆಟಪ್ ಆರಿಸಿ. ಕಸ್ಟಂ ಸೆಟಪ್ ಆರಿಸಿದರೆ, ಮೀಡಿಯಾ ಸೆಂಟರ್‌ನಲ್ಲಿ ಏನೆಲ್ಲಾ ಮಾಡಬಹುದು ಎಂಬ ಬಗ್ಗೆ ನಿಮಗೆ ಸ್ಥೂಲ ಪರಿಚಯವಾಗುತ್ತದೆ.
ವಿಂಡೋಸ್ ಮೀಡಿಯಾ ಸೆಂಟರ್ ಸೆಟಪ್ ಮಾಡುವುದು:
-
ವಿಂಡೋಸ್ 7ನಲ್ಲಿ ಸ್ಟಾರ್ಟ್ ಬಟನ್ ಕ್ಲಿಕ್ ಮಾಡಿ, ನಂತರ ಆಲ್ ಪ್ರೋಗ್ರಾಂಸ್ ಮತ್ತು ವಿಂಡೋಸ್ ಮೀಡಿಯಾ ಸೆಂಟರ್ ಆರಿಸಿ
-
ಸ್ವಾಗತ ಪುಟ ಕಾಣಿಸುತ್ತದೆ. ಅದರಲ್ಲಿ ಕಂಟಿನ್ಯೂ ಎಂಬುದನ್ನು ಕ್ಲಿಕ್ ಮಾಡಿ, ನಂತರ ಎಕ್ಸ್‌ಪ್ರೆಸ್ ಅಥವಾ ಕಸ್ಟಂ ಸೆಟಪ್ ಆರಿಸಿ.
-
ಕಸ್ಟಂ ಸೆಟಪ್ ಆರಿಸಿದರೆ, ನೆಟ್ವರ್ಕಿಂಗ್, ಇಂಟರ್ನೆಟ್ ಸಂಪರ್ಕ ಮುಂತಾದವುಗಳನ್ನು ಪರೀಕ್ಷಿಸುತ್ತದೆ, ಮತ್ತು ನಿಮ್ಮ ಆವಶ್ಯಕತೆಗಳಿಗೆ ತಕ್ಕಂತೆ ಆಧುನೀಕೃತ ಸಂಯೋಜನೆಗಳನ್ನು (Advanced Settings) ಹಾಗೂ ವೈಶಿಷ್ಟ್ಯಗಳನ್ನು ಆಯ್ದು ಅಳವಡಿಸಿಕೊಳ್ಳಲು ನೆರವಾಗುತ್ತದೆ.
-
ನೀವು ಮೊದಲ ಬಾರಿ ಎಕ್ಸ್‌ಪ್ರೆಸ್ ಸೆಟಪ್ ಆರಿಸಿದರೆ, ನೀವು ಕಸ್ಟಂ ಸೆಟಪ್ ಅನ್ನು ಬಳಿಕವೂ ಆರಿಸಬಹುದು (ಟಾಸ್ಕ್ಸ್ > ಸೆಟ್ಟಿಂಗ್ಸ್ > ಜನರಲ್ > ವಿಂಡೋಸ್ ಮೀಡಿಯಾ ಸೆಂಟರ್ ಸೆಟಪ್ > ರನ್ ಸೆಟಪ್ ಎಗೇನ್ ಎಂಬುದನ್ನು ಆರಿಸಿದರಾಯಿತು.)
-
ಕಸ್ಟಂ ಆರಿಸಿದ ಬಳಿಕ, “ಗೆಟ್ ದ ಮೋಸ್ಟ್ ಫ್ರಂ ವಿಂಡೋಸ್ ಮೀಡಿಯಾ ಸೆಂಟರ್” ಎಂಬ ಶೀರ್ಷಿಕೆಯುಳ್ಳ ಪುಟಕ್ಕೆ ಹೋಗಲು, ನೆಕ್ಸ್ಟ್ ಕ್ಲಿಕ್ ಮಾಡಿ.
-
ನಿಮ್ಮ ಸಂಗೀತ, ಚಲನಚಿತ್ರ ಮಾಹಿತಿ, ಟಿವಿ ಕಾರ್ಯಕ್ರಮಗಳ ಪಟ್ಟಿ, ನಿಗದಿತ ಅವಧಿಗೆ ರೆಕಾರ್ಡ್ ಮಾಡುವ ಆಯ್ಕೆಗಳು ಮುಂತಾದ ಆನ್‌ಲೈನ್ ಟಿವಿ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ, ಕಾಲ ಕಾಲಕ್ಕೆ ಹೊಸ ಅಪ್‌ಡೇಟ್‌ಗಳನ್ನು ಸ್ವೀಕರಿಸುವಂತಾಗಲು ಅದಕ್ಕೆ ಸಂಬಂಧಿಸಿದ ಆಯ್ಕೆಯನ್ನು ಕ್ಲಿಕ್ ಮಾಡಿ.
ನೆನಪಿಡಿ, ಆನ್‌ಲೈನ್ ಟಿವಿ ವೀಕ್ಷಿಸಲು ಅತ್ಯಧಿಕ ವೇಗದ ಅಂತರಜಾಲ ಸಂಪರ್ಕ ಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದ ಶುಲ್ಕಗಳು ಅನ್ವಯವಾಗಬಹುದು. ಮತ್ತು ಟಿವಿ ಪ್ರೋಗ್ರಾಂಗಳನ್ನು ನೇರವಾಗಿ ನಿಮ್ಮ ಕಂಪ್ಯೂಟರಿನಲ್ಲಿ ವೀಕ್ಷಿಸಲು, ರೆಕಾರ್ಡ್ ಮಾಡಲು ಟಿವಿ ಕೇಬಲ್ ಸಂಪರ್ಕದೊಂದಿಗೆ ಟಿವಿ ಟ್ಯೂನರ್ ಕಾರ್ಡ್‌ನ ಅಗತ್ಯವಿರುತ್ತದೆ.