ವರ್ಡ್ ಡಾಕ್ಯುಮೆಂಟ್‌ಗೆ ವಾಟರ್ ಮಾರ್ಕ್ ಸೇರಿಸುವುದು

ಒಂದು ದಾಖಲೆ ಪತ್ರದ ಕುರಿತು ಸ್ಥೂಲ ಮಾಹಿತಿ ನೀಡಲು, ಅಥವಾ ಕೃತಿಸ್ವಾಮ್ಯ ಕುರಿತು ಮಾಹಿತಿ ನಮೂದಿಸಲು ಚಿತ್ರ ಛಾಯೆ (ವಾಟರ್ ಮಾರ್ಕ್) ಸೇರಿಸುವುದನ್ನು ನೀವು ಕೇಳಿದ್ದೀರಿ. ನೀವು ತಯಾರಿಸುವ ವರ್ಡ್ ಡಾಕ್ಯುಮೆಂಟ್‌ನಲ್ಲಿಯೂ ಇದನ್ನು ಅಳವಡಿಸಿಕೊಳ್ಳುವುದು ಹೇಗೆ? ಎಂಬ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗುತ್ತದೆ.

ನೀವು ರಚಿಸಿರುವ ದಾಖಲೆಯು ಒಂದು ಕರಡು ದಾಖಲೆಯೇ, ಅಂತಿಮ ದಾಖಲೆಯೇ ಅಥವಾ ಒಂದು ನಕಲು ದಾಖಲೆಯೇ ಎಂಬುದನ್ನು ಸೂಚಿಸಲು ಕೂಡ ಈ ವಾಟರ್ ಮಾರ್ಕ್ ಬಳಸಲಾಗುತ್ತದೆ. ಮಾತ್ರವಲ್ಲದೆ, ನಿಮ್ಮ ಸಂಸ್ಥೆಯ ಲೋಗೋವನ್ನು ಹಿನ್ನೆಲೆಯಾಗಿರಿಸುವ ದಾಖಲೆ ಸಿದ್ಧಪಡಿಸಲು ಕೂಡ ಈ ವಾಟರ್ ಮಾರ್ಕ್ ಉಪಯೋಗಕ್ಕೆ ಬರುತ್ತದೆ. ಅಂದರೆ ನಿಮ್ಮ ಕಂಪನಿಯ ಲೋಗೋ, ಸೀಲ್ ಮುಂತಾದವುಗಳನ್ನು ವರ್ಡ್ ಡಾಕ್ಯುಮೆಂಟಿನ ಹಿನ್ನೆಲೆ ಚಿತ್ರವಾಗಿ ಬಳಸಿಕೊಳ್ಳಬಹುದಾಗಿದೆ.

ಈ ರೀತಿಯ ಚಿತ್ರಗಳನ್ನು ವಾಟರ್ ಮಾರ್ಕ್ ಆಗಿ ಸೇರಿಸುವುದು ಹೇಗೆ? ತುಂಬಾ ಕಷ್ಟವಿದೆಯಾ ಎಂದು ಯೋಚಿಸುತ್ತಿರುವವರಿಗೆ ಉತ್ತರ ಇಲ್ಲಿದೆ. ಇದು ಅತ್ಯಂತ ಸುಲಭ!

ಈ ಸರಳ ಹಂತಗಳನ್ನು ಈ ಕೆಳಗೆ ನೀಡಲಾಗಿದೆ.

  1. ಪೇಜ್ ಲೇಔಟ್ ರಿಬ್ಬನ್ ತೆರೆಯಿರಿ.
  2. ಪೇಜ್ ಬ್ಯಾಕ್‌ಗ್ರೌಂಡ್ ವಿಭಾಗದಲ್ಲಿ, ವಾಟರ್ ಮಾರ್ಕ್ ಕ್ಲಿಕ್ ಮಾಡಿ.
  3. ಡ್ರಾಪ್‌ಡೌನ್ ಪಟ್ಟಿಯಿಂದ ಕಸ್ಟಮ್ ವಾಟರ್‌ಮಾರ್ಕ್ ಆರಿಸಿ.
  4. ಪಿಕ್ಚರ್ ವಾಟರ್ ಮಾರ್ಕ್ ಕ್ಲಿಕ್ ಮಾಡಿ.
  5. ಪ್ರಿಂಟೆಡ್ ವಾಟರ್‌ಮಾರ್ಕ್ ಬಾಕ್ಸ್‌ನಲ್ಲಿ, ಸೆಲೆಕ್ಟ್ ಪಿಕ್ಟರ್ ಆರಿಸಿ ಮತ್ತು ನಿಮ್ಮ ಫೋಟೋಗೆ ನ್ಯಾವಿಗೇಟ್ ಮಾಡಿ.
  6. ಚಿತ್ರ ಆಯ್ಕೆ ಮಾಡಿದ ನಂತರ ಇನ್ಸರ್ಟ್ ಕ್ಲಿಕ್ ಮಾಡಿ.
  7. ಈ ಚಿತ್ರದ ಗಾತ್ರವನ್ನು ವರ್ಡ್ ಸ್ವಯಂಚಾಲಿತವಾಗಿ ಹೊಂದಿಸುತ್ತದೆ. ಇಲ್ಲವಾದಲ್ಲಿ, ಸ್ಕೇಲ್ ಬಾಕ್ಸ್‌ನಲ್ಲಿ ಚಿತ್ರದ ಗಾತ್ರವನ್ನು ನೀವಾಗಿಯೇ ಬದಲಾಯಿಸುವ ಅವಕಾಶವೂ ಇದೆ.
  8. ಚಿತ್ರವನ್ನು ಲೈಟ್ ಮಾಡಬೇಕಿದ್ದರೆ, ವಾಶೌಟ್ ಎಂಬ ಆಯ್ಕೆಯನ್ನು ಬಳಸಿ.
  9. ಎಲ್ಲ ಬದಲಾವಣೆಗಳನ್ನು ಮಾಡಿ ಮುಗಿಸಿದ ಬಳಿಕ, ಅಪ್ಲೈ ಮತ್ತು ಓಕೆ ಕ್ಲಿಕ್ ಮಾಡಿ.

ಇದೇ ವಾಟರ್ ಮಾರ್ಕ್‌ಗೆ ನೀವು ಮತ್ತೆ ಬದಲಾವಣೆಗಳನ್ನು ಮಾಡುವ ಇರಾದೆಯಿದ್ದರೆ, ಪ್ರಿಂಟೆಡ್ ವಾಟರ್‌ಮಾರ್ಕ್ ಬಾಕ್ಸ್ ಅನ್ನು ಪುನಃ ತೆರೆದು ಬೇಕಾದ ಬದಲಾವಣೆಗಳನ್ನು ಮಾಡಬಹುದು.

ವರ್ಡ್ 2007ರಲ್ಲಿ ಸಾಕಷ್ಟು ವಾಟರ್‌‍ಮಾರ್ಕ್‌ಗಳಿವೆ ಮತ್ತು ನಿಮ್ಮ ಅಗತ್ಯಕ್ಕೆ ತಕ್ಕಂತೆ ವಾಟರ್ ಮಾರ್ಕ್‌ಗಳನ್ನು ರೂಪಿಸಲು ವರ್ಡ್ 2007 ಅತ್ಯಂತ ಸರಳ ವಿಧಾನದಲ್ಲಿ ಸಹಕರಿಸುತ್ತದೆ. ಟೆಕ್ಸ್ಟ್ (ಪಠ್ಯ) ವಾಟರ್ ಮಾರ್ಕ್‌ಗಳಿಗೆ ಸಾಕಷ್ಟು ಹೆಚ್ಚಿನ ಆಯ್ಕೆಗಳಿವೆ. ಅಂದರೆ ಫಾಂಟ್, ಗಾತ್ರ, ಪಾರದರ್ಶಕತೆ, ಲೇಔಟ್ ಮತ್ತು ಬಣ್ಣ ಮುಂತಾದವುಗಳನ್ನು ಬದಲಾಯಿಸಲು ಆಯ್ಕೆಗಳಿವೆ.

Read More on....