ಮನರಂಜನೆಗೆ ಅದ್ಭುತ ಕೊಡುಗೆ-ವಿಂಡೋಸ್ ಮೀಡಿಯಾ ಸೆಂಟರ್

ಇದೊಂದು ಅದ್ಭುತವಾದ ಮನರಂಜನಾ ಕೇಂದ್ರ. ಇಲ್ಲಿ ನೀವು ಲೈವ್ ಟಿವಿಯನ್ನು ನೋಡಬಹುದು, ರೆಕಾರ್ಡ್ ಮಾಡಬಹುದು ಮತ್ತು ಅನ್ಯ ಕೆಲಸವೇನಾದರೂ ಇದ್ದರೆ, ಟಿವಿ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ (pause) ನಂತರ ವೀಕ್ಷಿಸಬಹುದು. ನಿಮ್ಮ ಭಾವಚಿತ್ರಗಳ ಸಂಗ್ರಹವನ್ನು ಇತರರಿಗೆ ತೋರಿಸಬಹುದು. ಒಟ್ಟಿನಲ್ಲಿ ಆನ್‌ಲೈನ್‌ನ ಎಲ್ಲಾ ಮನರಂಜನೆಗಳನ್ನೂ ಇಲ್ಲಿ ನೀವು ಪಡೆಯಬಹುದು. ಬಹುಶಃ ಈ ಎಲ್ಲಾ ಕಾರಣಗಳಿಗಾಗಿ ಮೀಡಿಯಾ ಸೆಂಟರ್ ಎಂಬುದು ವಿಂಡೋಸ್‌ನ ಅತ್ಯಂತ ಅಮೂಲ್ಯ ಆಸ್ತಿ ಎಂದೇ ಪರಿಗಣಿಸಲ್ಪಟ್ಟಿದೆ.
ಆದರೆ, ವಿಂಡೋಸ್ 7ನಲ್ಲಿ ಮೀಡಿಯಾ ಸೆಂಟರನ್ನು ಮತ್ತಷ್ಟು ಕೆಲಸ ಕಾರ್ಯಗಳನ್ನು ಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಇದಕ್ಕೆಲ್ಲಾ ಕಂಪ್ಯೂಟರ್ ಬಳಕೆದಾರರು ನೀಡಿರುವ ಸಲಹೆಗಳೇ ಪ್ರೇರಣೆ ಎಂದು ಈಗಾಗಲೇ ಮೈಕ್ರೋಸಾಫ್ಟ್ ಹೇಳಿಕೊಂಡಿದೆ. ವಿಂಡೋಸ್ 7ನ ಹೋಂ ಪ್ರೀಮಿಯಂ, ಪ್ರೊಫೆಶನಲ್, ಅಲ್ಟಿಮೇಟ್ ಹಾಗೂ ಎಂಟರ್‌ಪ್ರೈಸ್ ಆವೃತ್ತಿಗಳಲ್ಲಿ ಮೀಡಿಯಾ ಸೆಂಟರ್ ಲಭ್ಯವಿರುತ್ತದೆ.
ಜನಪ್ರಿಯ ಕಡತ ನಮೂನೆಗಳ ಬೆಂಬಲ:
ವಿಂಡೋಸ್ ಮೀಡಿಯಾ ಸೆಂಟರನ್ನು ಡಿಜಿಟಲ್ ಮತ್ತು ಎಚ್‌ಡಿ ಸೇರಿದಂತೆ ಜಾಗತಿಕ ಗುಣಮಟ್ಟದ ಟಿವಿ ವೀಕ್ಷಣೆಗಾಗಿ ವಿನ್ಯಾಸಗೊಳಿಸಲಾಗಿದೆ. ಮಾತ್ರವಲ್ಲದೆ ಅದು ಹೆಚ್ಚು ಜನಪ್ರಿಯವಾಗಿರುವ 3GP, AAC, AVCHD, MPEG-4, WMV ಮತ್ತು WMA ಮುಂತಾದ ಕಡತ ನಮೂನೆಗಳನ್ನೂ ಬೆಂಬಲಿಸುತ್ತದೆ. ಇದರೊಂದಿಗೆ AVI, DivX, MOV ಮತ್ತು Xvid ಕಡತಗಳನ್ನೂ ಬೆಂಬಲಿಸುತ್ತದೆ.

ಸಂಗೀತ ಲೈಬ್ರರಿಯಲ್ಲಿರುವ ದೊಡ್ಡ ಸಂಖ್ಯೆಯ ಸಂಗೀತ ಕಡತಗಳನ್ನು ಜಾಲಾಡಲು ಸುಲಭವಾಗಿಸುವುದು ಹೊಸ ಟರ್ಬೋ ಸ್ಕ್ರೋಲ್ ಎಂಬ ವ್ಯವಸ್ಥೆ.

ಇದಲ್ಲದೆ, ಆನ್‌ಲೈನ್ ಶೋಗಳು ಹಾಗೂ ಚಲನಚಿತ್ರಗಳನ್ನು ವೀಕ್ಷಿಸಲು ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮ ಗೈಡ್‌ಗಳನ್ನು ವೀಕ್ಷಿಸಲು ಇಂಟರ್ನೆಟ್ ಟಿವಿ ವ್ಯವಸ್ಥೆಯೂ ಇದ್ದು, ಇದಕ್ಕಾಗಿ ಪ್ರತ್ಯೇಕ ಟಿವಿ ಟ್ಯೂನರ್ ಅಗತ್ಯವಿರುವುದಿಲ್ಲ.

ಸ್ಲೈಡ್ ಶೋ ಮೇಕರ್:
ವಿಂಡೋಸ್ ಮೀಡಿಯಾ ಸೆಂಟರ್‌ನಲ್ಲಿ ನಿಮಗೆ ಅತ್ಯಂತ ಇಷ್ಟವಾಗುವ ಸಂಗತಿಯೆಂದರೆ ಅದರ ಹೊಸದಾದ ಸ್ಲೈಡ್ ಶೋ ಮೇಕರ್. ಯಾವುದೇ ಶುಭ ಸಮಾರಂಭಗಳು ಅಥವಾ ಪಾರ್ಟಿ ಮುಂತಾದ ಖಾಸಗಿ ಆಚರಣೆಗಳ ಫೋಟೋಗಳನ್ನು, ಸುಂದರವಾಗಿ ಕೊಲಾಜ್ ನಿರ್ಮಿಸಿ ಅದಕ್ಕೆ ಹಿನ್ನೆಲೆ ಸಂಗೀತವನ್ನೂ ಸೇರಿಸಿ, ವೀಡಿಯೋದಂತೆಯೇ ನಿಮ್ಮ ನೆನಪುಗಳನ್ನು ಶೇಖರಿಸಿಡಬಹುದು. ಇಷ್ಟು ಮಾತ್ರವಲ್ಲದೆ, ಇದೇ ಸ್ಲೈಡ್ ಶೋವನ್ನು ಸ್ಕ್ರೀನ್ ಸೇವರ್ ಆಗಿಯೂ ನೀವು ಬಳಸಬಹುದು.

ರೆಕಾರ್ಡ್ ಮಾಡಲಾಗಿರುವ ಟಿವಿ ಶೋಗಳು, ಸಂಗೀತ, ವೀಡಿಯೋ ಮುಂತಾದವುಗಳನ್ನು ನೀವು ಹೋಂ ಗ್ರೂಪ್ ಬಳಸಿ ನಿಮ್ಮ ಮನೆಯ ಇತರ ಸದಸ್ಯರ ವಿಂಡೋಸ್ 7 ಕಂಪ್ಯೂಟರಿನೊಂದಿಗೆ ಸುಲಭವಾಗಿ ಹಂಚಿಕೊಳ್ಳಬಹುದು.

ಇದಲ್ಲದೆ, ಮೀಡಿಯಾ ಸೆಂಟರ್ ಗ್ಯಾಜೆಟ್ ಕೂಡ ಹೊಸತನದಿಂದ ಕೂಡಿದ್ದು, ಇದರಲ್ಲಿ ಹಾಡುಗಳ ಮತ್ತು ವೀಡಿಯೋಗಳ ವಿವರಗಳೂ ಲಭ್ಯವಿರುತ್ತವೆ. ಸುಲಭವಾಗಿ ನೋಡಬಹುದಾದ ಕಿರು ಚಿತ್ರಗಳು (ಥಂಬ್‌ನೇಲ್) ಗಮನ ಸೆಳೆಯುತ್ತವೆ.

Read More on....