|
|
|
|
|
|
|
|
| ಆಫೀಸ್ 2003 ಹಿಂದಿಯಲ್ಲಿ |
ಮೈಕ್ರೋಸಾಫ್ಟ್ ಮೈಕ್ರೋಸಾಫ್ಟ್ ಆಫೀಸ್ 2003 ರ ಹಿಂದಿ ಆವೃತ್ತಿ ಲಭ್ಯವಿದೆ. ಇದನ್ನು ಇನ್‌ಸ್ಟಾಲ್ ಮಾಡಿಕೊಂಡರೆ ಆಫೀಸ್‌ನ ಎಲ್ಲ ಆದೇಶ, ಸಂದೇಶ ಮತ್ತು ಸಹಾಯಗಳು ಹಿಂದಿ ಭಾಷೆಯಲ್ಲೇ ಬರುತ್ತವೆ. ಇದು ಕನ್ನಡ ಭಾಷೆಗೆ ಲಭ್ಯವಿರುವ ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್‌ಗಿಂತ ಭಿನ್ನವಾಗಿದೆ. ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್‌ನಲ್ಲಿ ದಿನನಿತ್ಯ ಬಳಕೆಗೆ ಬೇಕಾಗುವ 80% ಕನ್ನಡದ ಅನುಭವ ಬರುವಂತೆ ಅನುವಾದ ಮಾಡಲಾಗಿದೆ. ಆದರೆ ಆಫೀಸ್ 2003 ಹಿಂದಿ ಆವೃತ್ತಿಯಲ್ಲಿ ಸಂಪೂರ್ಣವಾಗಿ ಅನುವಾದ ಮಾಡಲಾಗಿದೆ.
ಈ ಆಫೀಸ್ 2003ರ ಹಿಂದಿ ಆವೃತ್ತಿಯನ್ನು ಮೈಕ್ರೋಸಾಫ್ಟ್‌ನವರ ಅಂತರಜಾಲ ತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಲು ಅಸಾಧ್ಯ. ಇದನ್ನು ಹಣ ಕೊಟ್ಟು ಕೊಂಡುಕೊಳ್ಳಬೇಕು. ಈ ಹಿಂದಿ ಆವೃತ್ತಿಯನ್ನು ಆಫೀಸ್ 2003ರ ಇಂಗ್ಲೀಷ್ ಆವೃತ್ತಿಯ ಜೊತೆ ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ಹಾಗೆ ಮಾಡಿದಾಗ ಇಂಗ್ಲಿಷ್ ಅಥವಾ ಹಿಂದಿ ಭಾಷೆಗಳಲ್ಲಿ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳುವ ಸೌಕರ್ಯ ದೊರೆಯುತ್ತದೆ. ಈ ಇಂಗ್ಲೀಷ್ ಆವೃತ್ತಿಯ ಮೇಲೆ ಕನ್ನಡದ ಹೊದಿಕೆಯನ್ನೂ ಹಾಕಿಕೊಳ್ಳಬಹುದು. ಆಗ ಇಂಗ್ಲೀಷ್, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಯಾವುದು ಬೇಕೋ ಅದನ್ನು ಚಾಲಿಸುವ ಸೌಲಭ್ಯ ದೊರೆಯುತ್ತದೆ. ಈ ಭಾಷಾ ಆಯ್ಕೆಯ ಸೌಲಭ್ಯವು ಆದೇಶ, ಮೆನು ಮತ್ತು ಸಂದೇಶಗಳಿಗೆ ಅನ್ವಯಿಸುತ್ತದೆ. ಯಾವ ಭಾಷೆಯನ್ನು ಆಯ್ಕೆ ಮಾಡಿಕೊಂಡಿದ್ದರೂ ಅದನ್ನು ಬಳಸಿ ಯಾವ ಭಾಷೆಯಲ್ಲಿ ಬೇಕಾದರೂ ಕಡತಗಳನ್ನು ಸಿದ್ಧಮಾಡಬಹದು. ಅಂದರೆ ಆಫೀಸ್ 2003 ಹಿಂದಿ ಆವೃತ್ತಿಯನ್ನು ಬಳಸಿ ಕನ್ನಡದಲ್ಲೂ ಬೆರಳಚ್ಚು ಮಾಡಬಹುದು.
ಆಫೀಸ್ 2003ರ ಒಂದು ಘಟಕವಾಗಿರುವ ವರ್ಡ್ 2003ರಲ್ಲಿ ಕಾಣಸಿಗುವ ಒಂದು ಸ್ಕ್ರೀನ್‌ಶಾಟ್ ಇಲ್ಲಿದೆ. ಎಲ್ಲ ಆದೇಶಗಳು ಹಿಂದಿ ಭಾಷೆಯಲ್ಲಿರುವುದನ್ನು ನೀವು ಇಲ್ಲಿ ಗಮನಿಸಬಹುದು. ಆದರೆ ಶಾರ್ಟ್‌ಕಟ್ ಕೀಲಿಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಉದಾಹರಣೆಗೆ ಇಂಗ್ಲಿಷಿನಲ್ಲಿ Paste ಎಂಬುದರ ಶಾರ್ಟ್‌ಕಟ್ Ctrl-V ಆಗಿದೆ. ಹಿಂದಿಯಲ್ಲೂ ಅದನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.
ಕೇವಲ ಮೆನು ಆದೇಶ ಮಾತ್ರವಲ್ಲ, ಸಂವಾದಚೌಕಗಳೂ ಹಿಂದಿ ಭಾಷೆಯಲ್ಲಿ ಕಂಡುಬರುತ್ತವೆ.
ಆಫೀಸ್ ತಂತ್ರಾಂಶಗುಚ್ಛದ ಎಲ್ಲ ಪ್ರಮುಖ ತಂತ್ರಾಂಶ ಘಟಕಗಳ ಹಿಂದಿ ಆವೃತ್ತಿ ಲಭ್ಯವಿವೆ. ಅವುಗಳೆಂದರೆ ಬಹುಪಾಲು ಮಂದಿ ಬಳಸುವ ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್ ಮತ್ತು ಔಟ್‌ಲುಕ್. ಹಿಂದಿ ಆವೃತ್ತಿಯಲ್ಲಿ ಈ ತಂತ್ರಾಂಶಘಟಕಗಳು ಹಿಂದಿಯಲ್ಲಿ ಕಾಣಿಸುತ್ತವೆ.
ಈಲ್ಲಿ ನೀಡಿರುವ ಚಿತ್ರವನ್ನು ಗಮನಿಸಿ. ಇದು ಎಕ್ಸೆಲ್‌ನಿಂದ ಪಡೆದ ಸ್ಕ್ರೀನ್‌ಶಾಟ್ ಆಗಿದೆ. ನಗದನ್ನು ನಮೂದಿಸುವಾಗ ಹಿಂದಿಯ "रू." ಎಂಬ ಸೌಲಭ್ಯವೂ ಇರುವುದನ್ನು ಗಮನಿಸಬಹುದು.
ಔಟ್‌ಲುಕ್‌ನಿಂದ ಪಡೆದ ಸ್ಕ್ರೀನ್‌ಶಾಟ್‌ನ್ನು ಗಮನಿಸಿ. ಇಲ್ಲಿ ಇಮೈಲ್ ಅನ್ನೂ ಹಿಂದಿಯಲ್ಲಿ ಬೆರಳಚ್ಚು ಮಾಡಿದ್ದನ್ನೂ ನೋಡಬಹುದು.
ಇದೇ ರೀತಿ ಪವರ್‌ಪಾಯಿಂಟ್‌ನಲ್ಲೂ ಹಿಂದಿಯಲ್ಲೇ ಆದೇಶ, ಮೆನುಗಳನ್ನು ನೋಡಬಹುದು. | |
|
|
|
|
|
|
|
|