ಭಾಷಾ ಕಂಪ್ಯೂಟಿಂಗ್- ಭಾರತ ಸರಕಾರದ ಉಪಕ್ರಮಗಳು
ಭಾಷೆ ಹಾಗೂ ಸಂಸ್ಕೃತಿಗೆ ಸಂಬಂಧಿಸಿದಂತೆ ಭಾರತವು ತನ್ನ ವೈವಿಧ್ಯತೆಗೆ ಹೆಸರಾಗಿದೆ. ಭಾರತದ ಪ್ರತಿಯೊಂದು ರಾಜ್ಯವೂ ಅಪೂರ್ವವಾದ ವಿಭಿನ್ನತೆಯನ್ನು ಹೊಂದಿದೆ. ಭಾರತದ ಅಧಿಕೃತ ಭಾಷೆ ಹಿಂದಿಯಾಗಿದ್ದು, ಸಾಮಾನ್ಯ ಸಂವಹನಕ್ಕಾಗಿ ಇಂಗ್ಲೀಷ್ ಭಾಷೆಯನ್ನು ಬಳಸುತ್ತಿದ್ದರೂ, ಉತ್ತಮ ರಾಷ್ಟ್ರೀಯ ಬಾಂಧವ್ಯಕ್ಕಾಗಿ ಪ್ರಾದೇಶಿಕ ಭಾಷೆಗಳನ್ನು ಬಲಪಡಿಸುವ ಅಗತ್ಯವಿದೆ ಎಂಬುದಾಗಿ ಭಾರತೀಯ ಸರ್ಕಾರ ಭಾವಿಸಿದೆ. ಕಂಪ್ಯೂಟರ್‌ಗಳಲ್ಲಿ ಭಾರತೀಯ ಭಾಷೆಗಳ ಪ್ರಸ್ತುತಿಗಾಗಿ ಸರ್ಕಾರವು ಅನೇಕ ಉಪಕ್ರಮಗಳನ್ನು ಕೈಗೊಂಡಿದೆ. ಭಾರತೀಯ ಭಾಷೆಗಳ ತಾಂತ್ರಿಕ ಅಭಿವೃದ್ಧಿ (ಟಿಡಿಐಎಲ್) ಯೋಜನೆಯು ಇಂತಹ ಒಂದು ಮಹತ್ವದ ಭಾಷಾ ಕಂಪ್ಯೂಟಿಂಗ್ ಪ್ರಯತ್ನವಾಗಿದೆ. ಟಿಡಿಐಎಲ್ ಯೋಜನಾ ನಿರ್ದೇಶಕಿ ಸ್ವರ್ಣಲತಾ ಅವರು ಟಿಡಿಐಎಲ್ ಮತ್ತು ಭಾಷಾ ಕಂಪ್ಯೂಟಿಂಗ್ ಡೊಮೇನ್ ಕುರಿತಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಯಂಬುತ್ತೂರಿನಲ್ಲಿ ನಡೆದ ತಮಿಳು ಅಂತರಜಾಲ ಸಮ್ಮೇಳನದಲ್ಲಿ ಸ್ವರ್ಣಲತಾ ಅವರು ಮಂಡಿಸಿದ ಅಭಿಪ್ರಾಯಗಳ ಆಯ್ದಭಾಗಗಳು ಇಲ್ಲಿವೆ.
"ಜಗತ್ತಿನ ರಾಷ್ಟ್ರಗಳಲ್ಲಿ ಭಾರತವು ಒಂದು ಅಪರೂಪದ ರಾಷ್ಟ್ರ ಎಂಬುದು ಕೇವಲ ಬಾಯ್ಮಾತಲ್ಲ. ಭಾರತದಲ್ಲಿ 22 ಅಧಿಕೃತ ಭಾಷೆಗಳು ಮತ್ತು 11 ಲಿಪಿಗಳು ಬಳಕೆಯಲ್ಲಿವೆ. ಲಿಪಿಯೊಂದನ್ನು ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಬಳಸಲಾಗುತ್ತದೆ. ಇದೀಗ ನಾವು ಮಾಹಿತಿ ತಂತ್ರಜ್ಞಾನ ಯುಗದಲ್ಲಿದ್ದೇವೆ. ಗಣಕ ತಂತ್ರಜ್ಞಾನವು ಭಾಷೆಯ ಗೋಡೆಯನ್ನು ಮುರಿಯುತ್ತಿರುವುದು ಉತ್ತಮ ಬೆಳವಣಿಗೆ. ಆಯಾ ಭಾಷೆಗಳ ಬಳಕೆಯ ಮೂಲಕ ಸುಲಭವಾಗಿ ಮಾಹಿತಿ ಗಳಿಸುವ ಮೂಲಕ ಸಮಾಜದ ವಿವಿಧ ಸಮೂಹದ ನಡುವೆ ಗಣಕ ತಂತ್ರಜ್ಞಾನವು ಸೇತುವೆಯಾಗುತ್ತಿದೆ ಎಂಬುದು ಸಂತಸದ ವಿಚಾರ. ಹಾಗಾಗಿ ರಾಷ್ಟ್ರದೊಳಗೆ ವಿವಿಧ ಭಾಷೆಗಳನ್ನು ಮಾತನಾಡುವವರು ತಮ್ಮ ಮಾಹಿತಿಯನ್ನು ವಿನಿಮಯಿಸಿಕೊಳ್ಳಲು ಭಾಷಾ ಕಂಪ್ಯೂಟಿಂಗ್ ಕೇಂದ್ರ ಬಿಂದುವಾಗುತ್ತದೆ ಎಂಬುದು ಸಹಜವಾಗಿದೆ."
ಭಾರತೀಯ ಭಾಷೆಗಳಿಗೆ ತಾಂತ್ರಿಕ ಅಭಿವೃದ್ಧಿ
"ಭಾರತೀಯ ಭಾಷೆಗಳಿಗೆ ತಾಂತ್ರಿಕ ಅಭಿವೃದ್ಧಿಯು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ವಿಭಾಗ(ಡಿಐಟಿ)ದ ಕಾರ್ಯವಾಗಿದೆ. ಭಾರತೀಯ ಭಾಷೆಗಳಲ್ಲಿ ಮಾನವ ಯಂತ್ರ ಸಂವಾದ ಮತ್ತು ಬಹುಭಾಷಾ ಜ್ಞಾನ ಸಂಪನ್ಮೂಲಗಳನ್ನು ಪಡೆಯಲು ತಂತ್ರಜ್ಞಾನ ಅಭಿವೃದ್ಧಿಯು ಈ ಯೋಜನೆಯ ಉದ್ದೇಶವಾಗಿದೆ. ಮೂಲಭೂತ ಮಾಹಿತಿ ಸಂಸ್ಕರಣಾ ತಂತ್ರಜ್ಞಾನ ಅಭಿವೃದ್ಧಿ ಹಾಗೂ ಇವುಗಳ ಕ್ರೋಢೀಕರಣ, ಬಳಕೆದಾರ ಸ್ನೇಹಿ ರೂಪದಲ್ಲಿ ಒಟ್ಟು ಸೇರಿಸಿ ಮುಕ್ತ ಬಳಕೆಗಾಗಿ ಜನಸಾಮಾನ್ಯರಿಗೆ ಬಿಡುಗಡೆ ಮಾಡುವುದು ಸಚಿವಾಲಯದ ಉದ್ದೇಶವಾಗಿದೆ."
ಹಿಂದಿ, ತಮಿಳಿಗೆ ಪ್ರಾಧಾನ್ಯತೆ
"ಭಾಷಾ ಪಂಡಿತರು ಮತ್ತು ಸಾಫ್ಟ್‌ವೇರ್ ಇಂಜಿನಿಯರ್‌ಗಳನ್ನು ಒಟ್ಟು ಸೇರಿಸುವುದೇ ಭಾರತೀಯ ಭಾಷೆಗಳಲ್ಲಿ ಸಾಫ್ಟ್‌ವೇರ್ ಅಭಿವೃದ್ಧಿಯ ಬಹುದೊಡ್ಡ ಸಮಸ್ಯೆಯಾಗಿದೆ. ಭಾರತದ 22 ಅಧಿಕೃತ ಭಾಷೆಗಳಲ್ಲಿ ತಾಂತ್ರಿಕ ಅಭಿವೃದ್ಧಿಗಾಗಿ ಟಿಡಿಐಎಲ್ ಸಾಕಷ್ಟು ನಿಧಿ ಬಿಡುಗಡೆ ಮಾಡಿದೆ. ಭಾಷಾ ಪಂಡಿತರು ಮತ್ತು ಸಾಫ್ಟ್‌ವೇರ್ ಇಂಜಿನಿಯರ್‌ಗಳ ನಡುವೆ ಸೇತುವೆಯಂತೆ ಟಿಡಿಐಎಲ್ ಕಾರ್ಯ ನಿರ್ವಹಿಸಲಿದೆ. ಈ ಯೋಜನೆಯಲ್ಲಿ ಹಿಂದಿ ಹಾಗೂ ತಮಿಳು ಭಾಷೆಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗಿದೆ. ಏಕೆಂದರೆ, ಹಿಂದಿಯನ್ನು ರಾಷ್ಟ್ರದ ಬಹುತೇಕ ಭಾಗಗಳಲ್ಲಿ ಬಳಸಲಾಗುತ್ತದೆ ಮತ್ತು ತಮಿಳು ಭಾಷೆಗೆ ತಮಿಳ್ನಾಡು ಸರಕಾರವಲ್ಲದೆ, ಅನಿವಾಸಿ ಭಾರತೀಯರಿಂದಲೂ ಹೆಚ್ಚಿನ ಬೇಡಿಕೆ ಇದೆ."
ಟಿಡಿಐಎಲ್ ಬೆಂಬಲಿಸುವ ಯೋಜನೆಗಳು
1990-91ರಲ್ಲಿ ಈ ಯೋಜನೆ ಜನಿಸಿತು. ಟಿಡಿಐಎಲ್ ಬೆಂಬಲಿಸುವ ಯೋಜನೆಗಳೆಂದರೆ, ಕಾರ್ಪೋರಾ (ಅಕ್ಷರ ಸಂಚಯನ), ಒಸಿಆರ್, ಪಠ್ಯ-ಮಾತನಾಡಲು, ಯಂತ್ರ ಅನುವಾದ ಮತ್ತು ಮಾಹಿತಿ ಸಂಸ್ಕರಣಕ್ಕಾಗಿ ಜೆನೆರಿಕ್ ಸಾಫ್ಟ್‌ವೇರ್. ಕೀಲಿಮಣೆ ವಿನ್ಯಾಸಕ್ಕಾಗಿ ಮಾನಕಗಳು ಮತ್ತು ಮಾಹಿತಿ ವಿನಿಮಯಕ್ಕಾಗಿ ಆಂತರಿಕ ಸಂಕೇತಗಳು ವಿಕಾಸಗೊಂಡಿವೆ. ಇದು ಭಾರತೀಯ ಭಾಷೆಗಳಲ್ಲಿ ಮಾಹಿತಿ ಸಂಸ್ಕರಣ ಪರಿಹಾರಗಳ ವಿಶ್ವಾಸವನ್ನು ಸಾಬೀತುಪಡಿಸಿದೆ.
ಸರಕಾರ ಹಾಗೂ ಜನರ ಬೇಡಿಕೆಗಳು ಭಾರತೀಯ ಭಾಷಾ ತಂತ್ರಜ್ಞಾನದ ಪರಿಹಾರಕ್ಕೆ ಒತ್ತಡ ಹೇರಿದೆ. ಹಾಗಾಗಿ 2000-01ರ ವೇಳೆ ಸರ್ಕಾರವು ಟಿಡಿಎಲ್‌ಗಾಗಿ ಗುರಿಯೋಜಿತ ಯೋಜನೆಯನ್ನು ಅನಾವರಣಗೊಳಿಸಿತು. ಆ ವೇಳೆಗೆ ಏಳು ಮಹಾನ್ ಉಪಕ್ರಮಗಳ ಕುರಿತು ಅದು ಪ್ರಮುಖವಾಗಿ ಗಮನ ಹರಿಸಿತ್ತು. ಜ್ಞಾನ ಸಂಪನ್ಮೂಲಗಳು, ಜ್ಞಾನ ಪರಿಕರಗಳು, ಅನುವಾದ ಬೆಂಬಲ ವ್ಯವಸ್ಥೆಗಳು, ಮಾನವ ಯಂತ್ರ ಇಂಟರ್‌ಫೇಸ್ ವ್ಯವಸ್ಥೆಗಳು, ಸ್ಥಳೀಕರಣ, ಮಾನಕೀಕರಣ ಹಾಗೂ ಭಾಷಾ ತಾಂತ್ರಿಕ ಮಾನವ ಸಂಪನ್ಮೂಲ ಅಭಿವೃದ್ಧಿಯು ಇದರ ಪ್ರಮುಖ ಉಪಕ್ರಮಗಳಾಗಿದ್ದವು. ಭಾರತೀಯ ಭಾಷಾ ತಂತ್ರಜ್ಞಾನ ಸೊಲ್ಯೂಶನ್‌ಗಾಗಿ 13 ಸಂಪನ್ಮೂಲ ಕೇಂದ್ರಗಳು (ಆರ್ಸಿಯ-ಐಎಲ್‌ಟಿಎಸ್) ಎಲ್ಲಾ 18 ಭಾರತೀಯ ಭಾಷೆಗಳನ್ನು ವ್ಯಾಪಿಸಲು ಬೆಂಬಲಿಸಿದವು."
ಸಂಪನ್ಮೂಲ ಕೇಂದ್ರಗಳು
"ಅಸ್ಸಾಮಿ, ಹಿಂದಿ, ಕನ್ನಡ, ಮಳಯಾಳಂ, ಮರಾಠಿ, ಒರಿಯಾ, ಪಂಜಾಬಿ, ತಮಿಳು, ತೆಲುಗು, ಉರ್ದು, ಗುಜರಾತಿ, ಸಂಸ್ಕೃತ, ಬೋಡೋ, ಡೋಗ್ರಿ, ಮೈಥಿಲಿ, ನೇಪಾಳಿ, ಬಾಂಗ್ಲಾ, ಕಾಶ್ಮೀರಿ, ಕೊಂಕಣಿ, ಮಣಿಪುರಿ, ಸಂತಾಲಿ ಮತ್ತು ಸಿಂಧಿ ಭಾಷೆಗಳಿಗಾಗಿ ಟಿಡಿಎಲ್ ದತ್ತಾಂಶ ಕೇಂದ್ರವು ಮುಕ್ತ ಫಾಂಟ್‌ಗಳು ಮತ್ತು ಸಾಫ್ಟ್‌ನವೇರ್ ಪರಿಕರಗಳನ್ನು ಹೊಂದಿದೆ.
ಟಿಡಿಐಎಲ್ ಇದೀಗ ರಾಷ್ಟ್ರಾದ್ಯಂತ 13 ಸಂಪನ್ಮೂಲ ಕೇಂದ್ರಗಳನ್ನು ಹೊಂದಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರ (ಹಿಂದಿ, ನೇಪಾಳಿ), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮುಂಬೈ(ಮರಾಠಿ, ಕೊಂಕಣಿ), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗುವಾಹಟಿ (ಅಸ್ಸಾಮಿ, ಮಣಿಪುರಿ), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು (ಕನ್ನಡ, ಸಂಸ್ಕೃತ), ಇಂಡಿಯನ್ ಸ್ಟಾಸ್ಟಿಕಲ್ ಇನ್‌ಸ್ಟಿಟ್ಯೂಟ್ ಕೋಲ್ಕತಾ (ಬೆಂಗಾಲಿ), ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯ, ನವದೆಹಲಿ ವಿದೇಶಿ ಭಾಷೆಗಳು (ಜಪಾನಿ, ಚೀನೀ) ಮತ್ತು ಹೈದರಾಬಾದಿನ ಸಂಸ್ಕೃತ (ಭಾಷಾ ಕಲಿಕಾ ವ್ಯವಸ್ಥೆಗಳು) ವಿಶ್ವವಿದ್ಯಾನಿಲಯ (ತೆಲುಗು), ಅಣ್ಣಾ ವಿಶ್ವವಿದ್ಯಾನಿಲಯ ಚೆನ್ನೈ (ತಮಿಳು), ಬರೋಡಾದ ಎಂಎಸ್ ವಿಶ್ವವಿದ್ಯಾನಿಲಯ (ಗುಜರಾತಿ) ಉತ್ಕಲ್ ವಿಶ್ವವಿದ್ಯಾನಿಲಯದ ಕಂಪ್ಯೂಟರ್ ಮತ್ತು ಅಪ್ಲಿಕೇಶನ್ಸ್ ವಿಭಾಗ (ಒರಿಯ), ಪಾಟಿಯಾಲದ ತಾಪರ್ ಇನ್ಸ್‌ಟಿಟ್ಯೂಟ್ ಆಫ್ ಇಂಜೀನಿಯರಿಂಗ್ & ಟೆಕ್ನಾಲಜಿ (ಪಂಜಾಬಿ), ತಿರುವನಂತಪುರದ ಇಆರ್‌ಡಿಸಿಐ (ಮಳಯಾಳಂ) ಮತ್ತು ಪೂನಾದ ಸಿಡಿಎಸಿ (ಉರ್ದು, ಸಿಂಧಿ, ಕಾಶ್ಮೀರಿ) - ಇವುಗಳು ಸಂಪನ್ಮೂಲ ಕೇಂದ್ರಗಳಾಗಿವೆ."
ನ್ಯಾಶನಲ್ ರೋಲ್‌ಔಟ್ ಪ್ಲಾನ್ ಸಿಡಿ-ರೋಮ್
"ಟಿಡಿಐಎಲ್‌ನಲ್ಲಿ ನಾವು ಇಂಗ್ಲೀಷ್ ಗೋಡೆಯನ್ನು ಮುರಿಯುವಂತಹ ವ್ಯವಸ್ಥೆಯೊಂದರ ಕುರಿತು ಕಾರ್ಯನಿರತವಾಗಿದ್ದು, ರಾಷ್ಟ್ರೀಯ ಪಸರಿಸುವಿಕೆ (ನ್ಯಾಶನಲ್ ರೋಲ್‌ಔಟ್) ಈ ದಿಸೆಯ ಮೊದಲ ಹೆಜ್ಜೆಯಾಗಿದೆ. ಎಲ್ಲಾ 22 ಭಾರತೀಯ ಭಾಷೆಗಳಿಗೆ ಸಾಫ್ಟ್‌ವೇರ್ ಟೂಲ್‌ಗಳು ಮತ್ತು ಫಾಂಟ್‌ಗಳನ್ನು ಪಬ್ಲಿಕ್ ಡೊಮೇನ್‌ನಲ್ಲಿ ಈ ಯೋಜನೆ ಮೂಲಕ ಬಿಡುಗಡೆ ಮಾಡಲಾಯಿತು. ನ್ಯಾಶನಲ್ ರೋಲ್‌ಔಟ್ ಪ್ಲಾನ್ ಸಿಡಿ-ರೋಮ್‌ನಲ್ಲಿ ಪ್ರಾತಿನಿಧಿಕವಾಗಿ ಕೆಳಗಿನ ಸಾಫ್ಟ್‌ವೇರ್ ಟೂಲ್‌ಗಳಿದ್ದವು. ಅಕ್ಷರಗಳು, ಕೀಲಿಮಣೆ ಚಾಲಕಗಳು, ಪರಿವರ್ತಕಗಳು, ಸಂಪಾದಕಗಳು, ಬೆರಳಚ್ಚಿಸುವ ನಿರ್ದೇಶಕಗಳು, ಸಮಗ್ರ ಶಬ್ದ ಸಂಸ್ಕಾರಕ, ಭಾರತೀಯ ಓಪನ್ ಆಫೀಸ್, ದ್ವಿಭಾಷಾ ನಿಘಂಟುಗಳು, ಕಾಗುಣಿತ ಪರೀಕ್ಷಕ, ಟ್ರಾನ್ಸ್‌ಲಿಟರೇಶನ್ ಟೂಲ್, ಬ್ರೌಸರ್, ಇಮೇಲ್ ಗ್ರಾಹಕ, ಸಂದೇಶಕ, ಮಾತಿಗೆ ಪಠ್ಯ ವ್ಯವಸ್ಥೆ ಮತ್ತು ಓಸಿಆರ್‌ಗಳು. ಜನರು ಇವುಗಳನ್ನು www.ildc.gov.in ಮತ್ತು www.ildc.in ತಾಣಗಳಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಅಥವಾ ಜನತೆ ತಮ್ಮ ಹೆಸರು ನೋಂದಾಯಿಸಿದಲ್ಲಿ ಐಎಲ್‌ಡಿಸಿಯು ಸಿಡಿ-ರೋಮ್‌ಗಳನ್ನು ಅವರ ವಿಳಾಸಕ್ಕೆ ಕಳುಹಿಸಿಕೊಡಲಿದೆ. ಇದು ಸಂಪೂರ್ಣ ಉಚಿತ."
ಟಿಡಿಐಎಲ್ ಕಾರ್ಯನಿರತವಾಗಿರುವ ಪ್ರಮುಖ ಯೋಜನೆಗಳೆಂದರೆ -
"ಇಂಗ್ಲೀಷ್‌ನಿಂದ ಭಾರತೀಯ ಭಾಷೆಗಳಿಗೆ ಯಂತ್ರ ಅನುವಾದ ವ್ಯವಸ್ಥೆ (ಸಿಡಿಎಸಿ, ಪೂನಾ), ಆಂಗ್ಲ-ಭಾರತಿ ತಂತ್ರಜ್ಞಾನದೊಂದಿಗೆ ಇಂಗ್ಲೀಷ್‌ನಿಂದ ಭಾರತೀಯ ಭಾಷೆಗಳಿಗೆ ಯಂತ್ರ ಅನುವಾದ (ಎಂಟಿ) ವ್ಯವಸ್ಥೆ (ಐಐಟಿ ಕಾನ್ಪುರ), ಭಾರತೀಯ ಭಾಷೆಯಿಂದ ಭಾರತೀಯ ಭಾಷೆಗೆ ಯಂತ್ರ ಅನುವಾದ ವ್ಯವಸ್ಥೆ (ಐಐಐಟಿ ಹೈದರಾಬಾದ್), ಸಂಸ್ಕೃತ- ಹಿಂದಿ ಯಂತ್ರ ಅನುವಾದ (ಹೈದರಾಬಾದ್ ವಿಶ್ವವಿದ್ಯಾನಿಲಯ, ಜೆಎನ್‌ಯು), ಭಾರತೀಯ ಭಾಷೆಗಳಿಗೆ ದಾಖಲೆ ವಿಶ್ಲೇಷಣೆ ಮತ್ತು ಗುರುತಿಸುವಿಕೆ ವ್ಯವಸ್ಥೆ (ಐಐಟಿ, ದೆಹಲಿ) ಆನ್-ಲೈನ್ ಕೈಬರಹ ಗುರುತಿಸುವಿಕೆ (ಐಐಎಸ್, ಬೆಂಗಳೂರು), ಭಿನ್ನ ಭಾಷಾ ಮಾಹಿತಿ ಪ್ರವೇಶ (ಐಐಟಿ, ಬಾಂಬೆ), ಮಾತು ಸಂಚಯನ ಮತ್ತು ತಂತ್ರಜ್ಞಾನ (ಐಐಐಟಿ ಚೆನ್ನೈ) ಮತ್ತು ಭಾರತೀಯ ಭಾಷಾ ಸಂಚಯ ಉಪಕ್ರಮ (ಜೆಎನ್‌ಯು, ನವದೆಹಲಿ)"
ದೇಶೀ ಐಟಿ ರಂಗದ ಬೂಮ್
"ಭಾಷಾ ತಂತ್ರಜ್ಞಾನು ಭಾರತೀಯ ಆರ್ಥಿಕತೆಯ ಬೆನ್ನೆಲುಬಾಗಿದೆ. ಅಲ್ಲದೆ ರಫ್ತು ವ್ಯವಹಾರದತ್ತಲೇ ಕಣ್ಣು ಹರಿಸಿದ್ದ ಸಾಫ್ಟ್‌ವೇರ್ ಉದ್ಯಮದ ಬಹುದೊಡ್ಡ ಆಶಾಕಿರಣವಾಗಲಿದೆ. ಗ್ರಾಹಕೀಕೃತ ಮತ್ತು ಸ್ಥಳೀಕರಿಸಲಾಗಿರುವ ಐಟಿ ಸೊಲ್ಯೂಶನ್‌ಗಳಿಂದಾಗಿ ಸಾಫ್ಟ್‌ವೇರ್ ಕಂಪೆನಿಗಳ ದೃಷ್ಟಿ ಸ್ಥಳೀಯ ಮಾರುಕಟ್ಟೆಗಳತ್ತ ತಿರುಗಲಿದ್ದು, ದೇಶೀಯವಾಗಿ ಮಾಹಿತಿ ತಂತ್ರಜ್ಞಾನ ರಂಗವು ಉತ್ತುಂಗಕ್ಕೇರಲಿದೆ. ಈ ಪರಿಕರಗಳ ಬಳಕೆಯು ಸಮಾಜದ ವಿಸ್ತೃತ ಭಾಗಗಳಿಗೆ ತಲುಪಲು ಈ ಯೋಜನೆಯು ತಂತ್ರಜ್ಞಾನ ಅಭಿವೃದ್ಧಿಯ ಗುರಿಯಾಚೆಗೆ ಸಾಗಿ ಇತರ ಸಚಿವಾಲಯಗಳು ಹಾಗೂ ರಾಜ್ಯ ಸರ್ಕಾರಗಳ ಉಪಕ್ರಮಗಳೊಂದಿಗೆ ಜತೆಯಾಗಬೇಕಿದೆ."