ಟ್ಯಾನ್ ಟಿನ್ ವೀಅವರು ಭಾಷಾಇಂಡಿಯಾಗೆ ವಿಶೇಷ ಸಂದರ್ಶನ ನೀಡಲು ಮುಂದಾಗಿರುವುದು ನಮಗೆ ಹೆಮ್ಮೆಯ ವಿಚಾರ. ಭಾಷಾ ಕಂಪ್ಯೂಟಿಂಗ್, ಅದರಲ್ಲೂ ವಿಶೇಷವಾಗಿ ಅಂತಾರಾಷ್ಟ್ರೀಕೃತ ಡೊಮೇನ್ ಹೆಸರುಗಳ ಇತಿಹಾಸ, ಅಭಿವೃದ್ಧಿ ಮತ್ತು ಅವಕಾಶಗಳ ಕುರಿತು ವೀ ಅವರು ನಮ್ಮೊಂದಿಗೆ ಹಂಚಿಕೊಂಡಿರುವ ಸಂದರ್ಶನದ ಆಯ್ದ ಭಾಗವನ್ನು ಇಲ್ಲಿ ನೀಡಲಾಗಿದೆ,
ಭಾಷಾ: ನಿಮ್ಮೊಂದಿಗೆ ಮಾತನಾಡಲು ಅವಕಾಶ ಲಭಿಸಿದ್ದು ಭಾಷಾ ಇಂಡಿಯಾಗೆ ಒಂದು ಸಂತೋಷದ ಸಂದರ್ಭವಾಗಿದೆ. ಅಂತಾರಾಷ್ಟ್ರೀಕೃತ ಡೊಮೇನ್ ಹೆಸರು (Internationalized Domain Name) ಕಲ್ಪನೆಯ ಕುರಿತು ದಯವಿಟ್ಟು ತಿಳಿಸುವಿರಾ?
ವೀ: ಐಡಿಎನ್ (ಅಂತಾರಾಷ್ಟ್ರೀಕೃತ ಡೊಮೇನ್ ಹೆಸರುಗಳು) ನಿಮ್ಮ ಹಿಂದಿ, ಕನ್ನಡ, ತಮಿಳು ಅಥವಾ ಇನ್ಯಾವುದೇ ಇಂಗ್ಲೀಷೇತರ ವೆಬ್‌ಸೈಟ್‌ಗಳಂತೆಯೇ ಇತರೇ ಭಾಷೆಗಳಲ್ಲಿ ಡೊಮೇನ್ ಹೆಸರುಗಳನ್ನು ಅಭಿವ್ಯಕ್ತಿಸಲು ಸಮರ್ಥವಾಗಿಸುತ್ತದೆ. ಇಂಗ್ಲೀಷ್ (ಲ್ಯಾಟಿನ್) ಡೊಮೇನ್‌ಗಳ ಜಾಗದಲ್ಲಿ ನೀವು ಅಸ್ಕಿ(ASCII- American Standard Code for Information Interchange)ಯೇತರ ಅಕ್ಷರಗಳನ್ನು ಬಳಸಬಹುದಾಗಿದೆ.
ಅಂತಾರಾಷ್ಟ್ರೀಕೃತ ಡೊಮೇನ್ ಹೆಸರು ಕಲ್ಪನೆಯನ್ನು ತಿಳಿದುಕೊಳ್ಳುವುದಕ್ಕಿಂತ ಮುಂಚಿತವಾಗಿ ಡೊಮೇನ್ ಹೆಸರೇನೆಂದು ನಾವು ಮೊದಲು ತಿಳಿದುಕೊಳ್ಳೋಣ. ಡೊಮೇನ್ ಹೆಸರೊಂದು ತನ್ನ ವೈಶಿಷ್ಠ್ಯತೆಯಿಂದ ಇಂಟರ್ನೆಟ್ ಪ್ರೊಟೋಕಾಲ್ (ಐಪಿ) ಸಂಪನ್ಮೂಲಗಳನ್ನು ಅಂದರೆ ಅಂತರ್ಜಾಲದಲ್ಲಿನ ವೆಬ್‌ಸೈಟನ್ನು ಪತ್ತೆಹಚ್ಚುತ್ತದೆ. ಡೊಮೇನ್‌ಗಳು ಡೊಮೇನ್ ಹೆಸರು ವ್ಯವಸ್ಥೆ (Domain Name System (DNS))ಗಳ ಮೇಲೆ ಆಧಾರಿತವಾಗಿದೆ. ಸಂಖ್ಯಾತ್ಮಕ ವಿಳಾಸವಿರುವ ವೆಬ್‌ಸೈಟ್‌ಗಳನ್ನು ಸುಲಭವಾಗಿ ಗುರುತಿಸುವಂತಹ ಮತ್ತು ನೆನಪಿಸುವಂತಹ ಹೆಸರುಗಳನ್ನು ಒದಗಿಸುವುದು ಡೊಮೇನ್ ಹೆಸರುಗಳ ಪ್ರಮುಖ ಉದ್ದೇಶವಾಗಿದೆ. 2010ರ ಮಾರ್ಚ್ 15ರ ವೇಳೆಗಿನ ಅಂಕೆ ಸಂಖೆಗಳನ್ನು ಉಲ್ಲೇಖಿಸುವುದಾದರೆ, 84 ಮಿಲಿಯ ಅಂದರೆ 8 ಕೋಟಿ 40 ಲಕ್ಷ ಡೊಮೇನ್ ಹೆಸರುಗಳಿವೆ! ಆದರೆ ಈ ವೆಬ್‌ಸೈಟ್‌ಗಳ ಪ್ರವೇಶಕ್ಕಾಗಿ ಲ್ಯಾಟಿನ್ ಅಕ್ಷರಗಳನ್ನು ಮಾತ್ರ ಬೆರಳಚ್ಚಿಸಬೇಕು.
ಭಾಷಾ: ಡೊಮೇನ್ ಹೆಸರುಗಳಿಗೆ ಸಂಬಂಧಿಸಿದಂತೆ ಪ್ರಾದೇಶಿಕ ಭಾಷೆಗಳು ಹೊರಗುಳಿಯಲು ಏನು ಕಾರಣ?
ವೀ: ಅಮೆರಿಕದ ಐತಿಹಾಸಿಕ ಡಾಮಿನೆನ್ಸ್ ಮತ್ತು ಅಸ್ಕಿ ಅಕ್ಷರಗಳ ರೂಪಿಸುವಿಕೆಯು ಅಂತರ್ಜಾಲ ಬಳಕೆಯಿಂದ ಇಂಗ್ಲೀಷೇತರ ಬಳಕೆದಾರರನ್ನು ದೂರ ಇರಿಸಿದೆ. ಲ್ಯಾಟಿನ್ ಭಾಷೆ ಮತ್ತು ಲಿಪಿಗಳ ಬಳಕೆದಾರರಿಗಿಂತ ಅದನ್ನು ಬಳಸದಿರುವ ಬಹಳಷ್ಟು ಮಂದಿ ಅಂತರ್ಜಾಲ ಪ್ರವೇಶಿಸುತ್ತಾರಾದರೂ, ಯಾರೂ ಇದರತ್ತ ಲಕ್ಷ್ಯ ವಹಿಸಿರಲಿಲ್ಲ.
ಭಾಷಾ: ಹಾಗಾದರೆ, ಪ್ರಾದೇಶಿಕ ಭಾಷೆಗಳಲ್ಲಿ ಡೊಮೇನ್ ಹೆಸರಿಗಾಗಿ ಕೂಗು ಹೇಗೆ ಆರಂಭವಾಯಿತು?
ವೀ: 90ರ ದಶಕದಲ್ಲಿ ವೆಬ್ ಪುಟಗಳು ಇಂಗ್ಲೀಷೇತರ ಭಾಷೆಗಳಲ್ಲಿ ಕಾಣಿಸಿಕೊಳ್ಳಲು ಆರಂಭಗೊಂಡಾಗ ಪ್ರಾದೇಶಿಕ ಭಾಷೆಗಳಲ್ಲಿ ಡೊಮೇನ್ ಹೆಸರುಗಳಿಗೆ ಬೇಡಿಕೆ ಹೆಚ್ಚಿತು. ಈ ಹಿನ್ನೆಲೆಯಲ್ಲಿ ಐಡಿಎನ್ ಪ್ರಮುಖವಾದ ಪ್ರಥಮ ಹೆಜ್ಜೆಯಾಗಿದೆ. ಈ ಮೂಲಕ ತಮ್ಮ ದೇಶೀ ಭಾಷೆಯಲ್ಲೇ ಅಂತರ್ಜಾಲಕ್ಕೆ ಪ್ರವೇಶ ನಿಶಿದ್ಧವಾಗಿದ್ದಂತಹ ವಿಶ್ವದ ಬಹುತೇಕ ಅಂತರ್ಜಾಲ ಬಳಕೆದಾರರಿಗೆ ಅಂತರ್ಜಾಲ ಒದಗಿಸಲು ಐಡಿಎನ್‌ನದ್ದು ಚೊಚ್ಚಲ ಪ್ರಯತ್ನ.
ಮಾರ್ಟಿನ್ ಡರ್ಸ್ಟ್ ಎಂಬವರು 1996ರಲ್ಲಿ ಮೊದಲ ಬಾರಿಗೆ ಐಡಿಎನ್ ಪ್ರಸ್ತಾಪ ಮಾಡಿದರು. ನನ್ನ ಮುಂದಾಳುತ್ವದಲ್ಲಿ ಪ್ರಯೋಗಗಳು ನಡೆದು ಕೊನೆಗೂ ಐಡಿಎನ್ ಅಳವಡಿಕೆಯಾಯಿತು ಎಂದು ಹೇಳಲು ನನಗೆ ಬಹಳ ಹೆಮ್ಮೆಯಾಗುತ್ತದೆ. ಅಪ್ಲಿಕೇಶನ್‌ಗಳಲ್ಲಿ ಡೊಮೇನ್ ಹೆಸರುಗಳನ್ನು ಅಂತಾರಾಷ್ಟ್ರೀಕರಣ (ಐಡಿಎನ್ಎ) ಎಂಬ ವ್ಯವಸ್ಥೆಯನ್ನು ಒಂದು ಮಾನಕವಾಗಿ ಅಳವಡಿಸಿಕೊಳ್ಳಲಾಯಿತು ಮತ್ತು ಹಲವಾರು ಉನ್ನತ ಮಟ್ಟದ ಡೊಮೇನ್‌ಗಳಲ್ಲಿ ಇದನ್ನು ಅಳವಡಿಸಲಾಯಿತು.
ಭಾಷಾ: ಇದೀಗ ಯಾರಿಗಾದರೂ ಅಂತಾರಾಷ್ಟ್ರೀಕೃತ ಡೊಮೇನ್ ಹೆಸರುಗಳನ್ನು ನೋಂದಾಯಿಸಲು ಮತ್ತು ಬಳಸಲು ಸಾಧ್ಯವೇ?
ವೀ: ನಾನೀಗಾಗಲೇ ಹೇಳಿರುವಂತೆ ಕ್ರಿಯಾ ಯೋಜನೆಗಳನ್ನು ಕೈಗೊಳ್ಳಲಾಗಿದೆ ಮತ್ತು 1998ರಿಂದ ಧಾರ್ಮಿಕವಾಗಿ ಅನುಸರಿಸಲಾಗಿದೆ. ಐಡಿಎನ್ ವ್ಯವಸ್ಥೆಯನ್ನು ಪ್ರಮಾಣಬದ್ಧವಾಗಿಸಲು ವಹಿಸಲ್ಪಟ್ಟಿರುವ ಹೆಸರುಗಳು, ಸಂಖ್ಯೆಗಳಿಗಾಗಿ ಅಂತರ್ಜಾಲ ಒಕ್ಕೂಟ (ICANN- Internet Consortium for Assigned Names and Numbers)ವನ್ನು ರೂಪಿಸಲಾಗಿದೆ.
ಅದಕ್ಕೆ ತನ್ನ ಗುರಿಗಳನ್ನು ಸಾಧಿಸಲು ಹತ್ತು ವರ್ಷಗಳೇ ಸಂದಿತು. ಅಕ್ಟೋಬರ್ 2009ರಲ್ಲಿ ಅಂತರ್ಜಾಲದಲ್ಲಿ ಸ್ಥಳೀಯ ಭಾಷಾ ಲಿಪಿಗಳಿಗೆ ಐಡಿಎನ್ಎ ಬಳಸುವ ಉನ್ನತ ಮಟ್ಟದ ಡೊಮೇನ್‌ಗಳಿಗೆ ಅಂತಾರಾಷ್ಟ್ರೀಕೃತ ರಾಷ್ಟ್ರ ಸಂಕೇತಗಳನ್ನು ಸೃಷ್ಟಿಸಲು ಐಸಿಎಎನ್ಎನ್ ಅಂಗೀಕಾರ ನೀಡಿತು. 2010ರ ಮೇ ತಿಂಗಳಲ್ಲಿ ಡಿಎನ್‌ಎಸ್ ಮೂಲ ವಲಯದಲ್ಲಿ ಪ್ರಪ್ರಥಮ ಐಡಿಎನ್ ರಾಷ್ಟ್ರ ಸಂಕೇತ ಉನ್ನತ ಮಟ್ಟದ ಡೊಮೇನ್‌ಗಳು ಅಳವಡಿಸಲ್ಪಟ್ಟವು. ಪ್ರಸಕ್ತ, ಐ-ಡಿಎನ್ಎಸ್ ಡಾಟ್ ನೆಟ್ (i-DNS.net) ನಂತಹ ಕಂಪೆನಿಗಳು 60ಕ್ಕಿಂತಲೂ ಹೆಚ್ಚಿನ ಭಾಷೆಯಲ್ಲಿ ಡೊಮೇನ್ ಹೆಸರು ನೊಂದಾವಣೆಯನ್ನು ಬೆಂಬಲಿಸುತ್ತವೆ. ಈ ಪಟ್ಟಿಯು ಸದ್ಯವೇ ವಿಸ್ತರಣೆಗೊಳ್ಳಲಿದೆ.
ಭಾಷಾ: ವಾವ್! ಹಾಗಾದರೆ ಸದ್ಯವೇ ನಾವು ಹಿಂದಿ, ಕನ್ನಡ, ತಮಿಳು ಮುಂತಾದ ಪ್ರಾದೇಶಿಕ ಭಾಷೆಗಳಲ್ಲಿ ಡೊಮೇನ್ ಹೆಸರುಗಳನ್ನು ಸಾರ್ವಜನಿಕರು ಬಳಸುವುದನ್ನು ನಿರೀಕ್ಷಿಸಬಹುದು ಎಂದಾಯಿತು. ಆದರೆ, ಪ್ರಾದೇಶಿಕ ಭಾಷೆಗಳಲ್ಲಿ ಡೊಮೇನ್ ಹೆಸರುಗಳು ಭಾಷಾ ಕಂಪ್ಯೂಟಿಂಗ್‌ಗೆ ಹೇಗೆ ಅನುಕೂಲವಾಗಲಿದೆ?
ವೀ: ಕಂಪ್ಯೂಟರ್‌ನ ಉಪಯುಕ್ತತೆಗಳನ್ನು ಜನಸಾಮಾನ್ಯರಿಗೆ ತಲುಪಿಸುವುದೇ ಭಾಷಾ ಕಂಪ್ಯೂಟಿಂಗ್‌ನ ಮೂಲಭೂತ ಪರಿಕಲ್ಪನೆಯಾಗಿದೆ. ಪ್ರತಿಯೊಬ್ಬ ಮಾನವ ಜೀವಿಗೂ ತನ್ನದೇ ಭಾಷೆಯಲ್ಲಿ ಅಂತರ್ಜಾಲ ಪ್ರವೇಶದ ಹಕ್ಕು ಇರುತ್ತದೆ. ಒಮ್ಮೆ ವ್ಯಕ್ತಿಯೊಬ್ಬನಿಗೆ ಭಾಷಾ ಗಡಿಗಳನ್ನೆಲ್ಲ ಮೀರಿ ಮಾಹಿತಿವಲಯಕ್ಕೆ ಪ್ರವೇಶಾವಕಾಶದ ಹಕ್ಕು ಲಭಿಸಿದರೆ, ಆಕೆ ಅಥವಾ ಆತ ತನ್ನನ್ನು ಹೆಚ್ಚು ತೊಡಗಿಸಿಕೊಂಡ ಮತ್ತು ಜ್ಞಾನಹೊಂದಿದ ಪ್ರಜೆಯಾಗುತ್ತಾಳೆ/ನೆ ಮತ್ತು ಆ ವ್ಯಕ್ತಿ ಮಾಹಿತಿ ಮತ್ತು ಜ್ಞಾನ ಸೇರಿದಂತೆ ಎಲ್ಲಾ ವಿಷಯಗಳ ಗ್ರಾಹಕನಾಗುತ್ತಾನೆ. ಇದು ಐಡಿಎನ್ ನೀಡಲಿರುವ ಅತ್ಯುನ್ನತ ಅನುಕೂಲಗಳಲ್ಲಿ ಒಂದಾಗಿದೆ.
ವಿಶ್ವದ ಬಹುಪಾಲು ಜನಸಂಖ್ಯೆ ಇಂಗ್ಲೀಷ್ ಭಾಷಾ ಮೋಹಿಗಳಲ್ಲ. ಕನಿಷ್ಠವಾದರೂ ಇಂಗ್ಲೀಷ್ ಜ್ಞಾನವಿಲ್ಲದಿದ್ದರೆ, ಅಂತರ್ಜಾಲದ ಸಂಪನ್ಮೂಲಗಳನ್ನು ಪಡೆಯುವುದು ವ್ಯಕ್ತಿಯೊಬ್ಬನಿಗೆ ಬಹಳ ಕಷ್ಟವಾಗುತ್ತದೆ. ಅಂತರ್ಜಾಲದಲ್ಲಿ ಪ್ರಾದೇಶಿಕ ಭಾಷಾ ವಿಷಯಗಳಿವೆ ಎಂಬುದು ಸತ್ಯವಾದರೂ, ವ್ಯಕ್ತಿಯೊಬ್ಬ ಅವುಗಳನ್ನು ಪಡೆಯುವುದು ಹೇಗೆ? ಆಂಗ್ಲ ಭಾಷೆಯ ಜ್ಞಾನವಿಲ್ಲದೇ ಇದ್ದರೆ, ಆತ ಅಥವಾ ಆಕೆ ಡೊಮೇನ್ ಹೆಸರುಗಳನ್ನು(ವೆಬ್‌ಸೈಟ್ ವಿಳಾಸ) ಬೆರಳಚ್ಚಿಸುವುದು ಹೇಗೆ? ಈ ಅಡ್ಡಿಯನ್ನು ನಾವು ತೊಡೆದು ಹಾಕಿದೆವೆಂದಾದರೆ, ಜಗತ್ತಿನ ಸಂಪೂರ್ಣ ಮಂದಿಯು ಅಂತರ್ಜಾಲದ ಪ್ರಯೋಜನಗಳನ್ನು ಪಡೆಯಲು ಮತ್ತು ಅನುಭವಿಸಲು ಆರಂಭಿಸುತ್ತಾರೆ. ಅಲ್ಲದೆ, ತಮ್ಮದೇ ಭಾಷೆಯು ಶ್ರೀಮಂತವಾಗಲು ಅವರು ಕೊಡುಗೆ ನೀಡಲು ಆರಂಭಿಸುತ್ತಾರೆ. ಈ ರೀತಿಯಾಗಿ ಐಡಿಎನ್‌ಗಳು ಭಾಷಾ ಕಂಪ್ಯೂಟಿಂಗ್‌ಗೆ ಸಹಾಯ ಮಾಡುತ್ತದೆ.
ಭಾಷಾ: ಅಸ್ಕಿ ಅಥವಾ ಲ್ಯಾಟಿನ್ ಆಧರಿತ ಡೊಮೇನ್ ಹೆಸರಿನಂತೆಯೇ, ಆಂಗ್ಲೇತರರಿಗೆ ಇ-ಮೇಲ್ ಐಡಿ ಇನ್ನೊಂದು ಅಡೆತಡೆಯಾಗಿದೆ. ಅವರು ಯಾವಾಗ ತಮ್ಮದೇ ಭಾಷೆಯಲ್ಲಿ ಇ-ಮೇಲ್ ವಿಳಾಸಗಳನ್ನು ಹೊಂದಬಹುದಾಗಿದೆ?
ವೀ: ಐಡಿಎನ್‌ಗಳನ್ನು ಉನ್ನತ ಮಟ್ಟದಲ್ಲಿ ಪರಿಚಯಿಸಲು ಇತ್ತೀಚೆಗೆ ಐಸಿಎಎನ್ಎನ್ ಅನುಮತಿಸಿದೆ. ಇದು ಇ-ಮೇಲ್ ವಿಳಾಸದಲ್ಲಿ ಬರಿಯ ಇಂಗ್ಲೀಷ್ ಅಕ್ಷರಗಳ ನಿರ್ಬಂಧವನ್ನು ತೊಡೆದು ಹಾಕುತ್ತದೆ. ಹಾಗಾಗಿ ಈಗ ಇ-ಮೇಲ್ ಬಳಕೆದಾರರು ತಮ್ಮದೇ ಭಾಷೆಗಳಲ್ಲಿ ಇ-ಮೇಲ್ ವಿಳಾಸವನ್ನು ಹೊಂದಬಹುದಾಗಿದೆ.
ಭಾಷಾ: ಭಾಷಾ ಇಂಡಿಯಾವು, ತನ್ನ ಪೋರ್ಟಲ್ ಮುಖಾಂತರ ಭಾಷಾ ಕಂಪ್ಯೂಟಿಂಗ್ ಕುರಿತಂತೆ ಪ್ರಮುಖ ಭಾರತೀಯ ಭಾಷೆಗಳಲ್ಲಿ ಮಾಹಿತಿಯುಕ್ತ ವಿಷಯಗಳನ್ನು ನೀಡಲು ಇತ್ತೀಚೆಗೆ ಆರಂಭಿಸಿದೆ. ಒಬ್ಬ ಭಾಷಾ ಕಂಪ್ಯೂಟಿಂಗ್ ಉತ್ಸಾಹಿ ಹಾಗೂ ತಜ್ಞರಾಗಿರುವ ತಾವು ಇಂಡಿಕ್ ಭಾಷಾ ಕಂಪ್ಯೂಟಿಂಗ್‌ನಲ್ಲಿ ಭಾಷಾಇಂಡಿಯಾದ ಪ್ರಯತ್ನಗಳನ್ನು ಹೇಗೆ ಮೌಲ್ಯಮಾಪನ ಮಾಡುತ್ತೀರಿ? ಈ ಕುರಿತು ತಮ್ಮ ಯಾವುದೇ ಸಲಹೆ ಸೂಚನೆಗಳಿವೆಯೇ?
ವೀ: ನಾನು ಭಾಷಾ ಇಂಡಿಯಾವನ್ನು ನೋಡಿದ್ದೇನೆ ಮತ್ತು ಭಾರತೀಯ ಭಾಷೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಅಗತ್ಯವಿದ್ದರೆ ನಾನು ಅಲ್ಲಿಗೆ ಭೇಟಿ ನೀಡುತ್ತೇನೆ. ಇತ್ತೀಚೆಗೆ ಐಡಿಎನ್ ಕುರಿತಂತೆ ಶ್ರೀಯುತ ಮಣಿಯಮ್ (i-DNS.net International Inc) ಅವರ ಸಂದರ್ಶನ ಓದಿದೆ. ಭಾಷಾ ಇಂಡಿಯ ಪ್ರಯತ್ನಗಳು ಶ್ಲಾಘನಾರ್ಹ.
ಇದನ್ನು ಇನ್ನಷ್ಟು ಆಕರ್ಷಕ ಸಂಪನ್ಮೂಲ ಕೇಂದ್ರವಾಗಿಸಬೇಕು ಎಂಬುದೇ ನನ್ನ ಸಲಹೆ. ಕಂಪ್ಯೂಟರ್ ಅವಶ್ಯಕತೆ ತಮಗೂ ಇದೆ ಎಂಬುದು ಸಾಮಾನ್ಯ ಮಂದಿಗೆ ತಿಳಿಯುವಂತಾಗಬೇಕು. ನಿಮ್ಮ ವಿಷಯಗಳನ್ನು ಸರಳ ಹಾಗೂ ಸಹಜ ಭಾಷೆಯಲ್ಲಿ ಪ್ರಸ್ತುತುಪಡಿಸಿ. ಮಾಹಿತಿ ತಂತ್ರಜ್ಞಾನದ ಅಪರಿಮಿತ ಸಾಮರ್ಥ್ಯದ ಕುರಿತು ಜನತೆಯಲ್ಲಿ ಅರಿವು ಮೂಡಿಸಿ. ಕಂಪ್ಯೂಟರ್ ಲೋಕದಲ್ಲಿ ಪ್ರಾದೇಶಿಕ ಭಾಷೆಗಳೂ ಉದಯಿಸುತ್ತಿರುವ ಕಾರಣ ಇಂಗ್ಲೀಷಿಗೆ ಅಂಜಿ ಕುಳಿತುಕೊಳ್ಳಬೇಕಿಲ್ಲ ಎಂಬುದನ್ನು ಅವರಿಗೆ ತಿಳಿಸಿ.