ಮೈಕ್ರೋಸಾಫ್ಟ್ ಸಂಶೋಧನೆ

ಮೈಕ್ರೋಸಾಫ್ಟ್ ರೀಸರ್ಚ್ ಅಥವಾ ಸಂಕ್ಷಿಪ್ತ ರೂಪದಲ್ಲಿ MSR ಆಗಿರುವ ಸಂಶೋಧನಾ ಸಂಸ್ಥೆಯು ವಿಶ್ವಾದ್ಯಂತ ತಿಳಿದಿರುವ ಸಂಘಟನೆಯಾಗಿದೆ. ಪ್ರಸಕ್ತ  ಸಂಸ್ಥೆಯು 1991ರಲ್ಲಿ ರೂಪುಗೊಂಡಿದ್ದು ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಸಾಮಾನ್ಯ ಮತ್ತು ಆನ್ವಯಿಕ ಸಂಶೋಧನೆಯ ಮೇಲೆ ಬೆಳಕು ಚೆಲ್ಲುತ್ತಿದೆ. ವಿಶ್ವಾದ್ಯಂತ ಇದು ಎಂಟು ಶಾಖೆಗಳನ್ನು ಹೊಂದಿದೆ ಮತ್ತು ಸುಮಾರು 800 ಮಿಕ್ಕು ಸಂಶೋಧಕರನ್ನು ಹೊಂದಿದೆ. ಗಣಕಯಂತ್ರ ವಿಜ್ಞಾನ (computer science) ಕ್ಷೇತ್ರದಲ್ಲಿ ಕಾರ್ಯಾಚರಿಸುತ್ತಿರುವ ಏಕಮಾತ್ರ ಬೃಹತ್ ಸಂಶೋಧನಾ ಸಂಸ್ಥೆಯಾಗಿದೆ.


ಕಂಪ್ಯೂಟಿಂಗ್‌ನ 55 ವಿವಿಧ ವ್ಯಾಪ್ತಿಗಳಲ್ಲಿ ನಿರಂತರ ಸಂಶೋಧನೆ ನಡೆಯುತ್ತಿದೆ. ಎಂಎಸ್ಆರ್ ಅತ್ಯುನ್ನತವಾಗಿ ಗುರುತಿಸಲ್ಪಟ್ಟ ಪ್ರತಿಭೆಗಳನ್ನು ನೇಮಿಸಿಕೊಳ್ಳುತ್ತಿದ್ದು, ಇದರಲ್ಲಿ ಪ್ರತಿಷ್ಠಿತ ಟ್ಯೂರಿಂಗ್ (ಗಣಕ ತಂತ್ರಜ್ಞಾನದ ಅತ್ಯುನ್ನತ ಪ್ರಶಸ್ತಿ) ಪ್ರಶಸ್ತಿ ವಿಜೇತರೂ ಸೇರಿದ್ದಾರೆ.


ಎಂಎಸ್ಆರ್ ಅಂತರ್ಜಾಲ ತಾಣವು ತನ್ನ ಪ್ರಕಟಣಾ ವಿಭಾಗದಲ್ಲಿ ಯಥೇಚ್ಚವಾದ ಸಂಪನ್ಮೂಲಗಳನ್ನು ಒದಗಿಸುತ್ತದೆ. ಇದು ಹೊಸಬರಿಗೂ ಮತ್ತು ನುರಿತವರಿಗೂ ಸಾಕಷ್ಟು ಸರಕುಗಳನ್ನು ನೀಡುತ್ತದೆ. ಶೀರ್ಷಿಕೆ, ಲೇಖಕರು, ಸಾರಾಂಶ ಅಥವಾ ತತ್ವಾರ್ಥಗಳ ಮೂಲಕ ಶೋಧನೆಯನ್ನು ಒದಗಿಸಲಾಗಿದ್ದು, ಇದು ಮಾಹಿತಿಯನ್ನು ಅತ್ಯಂತ ಸುಲಭವಾಗಿ ಪಡೆಯುವಲ್ಲಿ ಸಹಕರಿಸುತ್ತದೆ. ಪ್ರಕಟಿತ ವಸ್ತುಗಳ ಸೋಸುವಿಕೆಗೂ ಅನುಕೂಲವಿದೆ.


ಸಂಶೋಧನೆಯಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನಗಳ ಕುರಿತು ತಿಳಿದುಕೊಳ್ಳುವ ಹುಮ್ಮಸ್ಸಿನವರು ಪ್ರೊಜೆಕ್ಟ್ ವಿಭಾಗದಲ್ಲಿ ತಮ್ಮ ದಾಹ ನೀಗಿಸಿಕೊಳ್ಳಬಹುದಾಗಿದೆ. ಇತ್ತೀಚಿನ ಸಂಶೋಧನಾ ಫಲಿತಾಂಶಗಳಲ್ಲಿ ತಾವು ಹೇಗೆ ಕೈಯಾಡಿಸಬಹುದು ಎಂಬ ಕುರಿತು ಇಲ್ಲಿ ಮಾಹಿತಿ ಹಾಗೂ ಮಾರ್ಗದರ್ಶನಗಳು ಲಭ್ಯ.


ಸಂಶೋಧನಾ ವ್ಯಾಪ್ತಿ ಹಾಗೂ ತಾಣಗಳಿಗೂ ಸೋಸುವಿಕೆಯನ್ನು ನೀಡಲಾಗಿದೆ. ಸೂಕ್ತ ಮಾಹಿತಿಯನ್ನು ಗುರುತಿಸಲು ಇದು ಸಾಕಷ್ಟು ಸಹಾಯಕವಾಗಿದೆ. ನೀವು ಸಾಂದರ್ಭಿಕವಾಗಿ ಮಾಹಿತಿ ಬಯಸುವವರಾಗಿರಬಹುದು ಅಥವಾ, ಗಂಭೀರ ಅಧ್ಯಯನದ ಆಕಾಂಕ್ಷಿಯಾಗಿರಬಹುದು; ಎಂಥಹುದೇ ಸಂದರ್ಭದಲ್ಲೂ ತೀರಾ ಇತ್ತೀಚಿನ ಮಾಹಿತಿಗಾಗಿ ವೀಡಿಯೋಗಳನ್ನು ನೋಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ http://research.microsoft.com/ಗೆ ಲಾಗಿನ್ ಆಗಿ.

Read More on....